ಪಾಣಾಜೆ: 2019ರಲ್ಲಿ ನಡೆದಿದ್ದ ನವವಿವಾಹಿತೆ ಅಕ್ಷತಾ ಕೊಲೆ ಪ್ರಕರಣದ ಆರೋಪಿ, ಆರ್ಲಪದವು ಒಡ್ಯ ಸಮೀಪದ ಕಲ್ಲಪದವು ನಿವಾಸಿ ಗಣೇಶ (42) ಎಂಬಾತನ ಮೃತದೇಹವು ಕತ್ತು ಸೀಳಿದ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಕೆರೆಯಿಂದ ಹೊರತೆಗೆದಾಗ ಕತ್ತು ಸೀಳಿದ ಸ್ಥಿತಿಯಲ್ಲಿ ಕಂಡುಬಂದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಗಣೇಶ ತಾನೇ ಸ್ವತಃ ಕತ್ತು ಕೊಯ್ದುಕೊಂಡು, ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಂಪ್ಯದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಮೃತ ಗಣೇಶ 2019ರಲ್ಲಿ ತನ್ನ ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದನು. 2019ರ ಜುಲೈ 18ರ ರಾತ್ರಿ ಕಲ್ಲಪದವಿನ ಮನೆಯಲ್ಲಿ ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಈ ದಾಂಪತ್ಯ ಕಲಹ ತಾರಕಕ್ಕೇರಿ, ಗಣೇಶ ತನ್ನ ನವವಿವಾಹಿತ ಪತ್ನಿ ಅಕ್ಷತಾ (22 ವರ್ಷ) ಅವರಿಗೆ ಚಾಕುವಿನಿಂದ ತೀವ್ರವಾಗಿ ಇರಿದಿದ್ದನು. ತೀವ್ರ ರಕ್ತಸ್ರಾವದಿಂದಾಗಿ ಅಕ್ಷತಾ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಂಪ್ಯದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

0 Comments