ಕಾಸರಗೋಡು : ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದ ಸಂಗಮವಾಗಿ ಐದು ದಿನಗಳ ಕಾಲ ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವಕ್ಕೆ ಗಣೇಶ ಮೂರ್ತಿಯ ಶೋಭಯಾತ್ರೆಯೊಂದಿಗೆ ವಿಸರ್ಜನೆ ನಡೆದು ಭಕ್ತಿಪೂರ್ವಕ ತೆರೆ ಬಿದ್ದಿತು.
ಗಣೇಶೋತ್ಸವದ ಸಮಾರೋಪ ದಿನವಾದ ನಿನ್ನೆ ನಡೆದ ಕಾರ್ಯಕ್ರಮವು ಭಕ್ತರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕೆ. ರಂಗನಾಥ ಶೆಣೈ ಮಾತನಾಡಿದರು. ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಮೆರೆದ ವಿಜೇತರಿಗೆ ಉಷಾ ಆರ್. ಶೆಣೈ ಬಹುಮಾನ ವಿತರಿಸಿ ಅಭಿನಂದಿಸಿದರು.
ಸಮಾರೋಪದ ಪ್ರಮುಖ ಆಕರ್ಷಣೆಯಾಗಿದ್ದ ಧ್ವಜಾವರೋಹಣದ ಬಳಿಕ ಭಕ್ತಿಭಾವದ ಅಲೆಗಳ ನಡುವೆ ಅದ್ದೂರಿ ಮೆರವಣಿಗೆ ನಡೆಯಿತು. ಭಜನೆ, ಘೋಷಣೆ ಹಾಗೂ ಧಾರ್ಮಿಕ ಉತ್ಸಾಹದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಗಣೇಶನಿಗೆ ಭಕ್ತಿಯ ಸಮರ್ಪಣೆ ಸಲ್ಲಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು. ಅಂತಿಮವಾಗಿ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ವಿಸರ್ಜಿಸಲಾಗುವುದರೊಂದಿಗೆ ಐದು ದಿನಗಳ ಗಣೇಶೋತ್ಸವವು ಸಂಪನ್ನಗೊಂಡಿತು.
ನಗರದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಮೆರವಣಿಗೆಯಲ್ಲಿ ಸ್ಥಿರಚಿತ್ರಗಳ ಸಂಖ್ಯೆಯನ್ನು ಹಿಂದಿನ ವರ್ಷಗಳಿಗಿಂತ ಕಡಿಮೆಗೊಳಿಸಲಾಗಿತ್ತು. ಭಕ್ತರ ಉತ್ಸಾಹ ಹಾಗೂ ಗಣೇಶೋತ್ಸವದ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಮೆರವಣಿಗೆ ಶಿಸ್ತಿನಿಂದ ಹಾಗೂ ವೈಭವೋಪೇತವಾಗಿ ನಡೆಯಿತು.
ಚಿತ್ರಗಳು : ಶ್ರೀಕಾಂತ್ ಕಾಸರಗೋಡು


0 Comments