ಎರ್ನಾಕುಲಂ : ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಆಗಮಿಸುತ್ತಿದ್ದ ವಿಮಾನವೊಂದು ಅಸಹಜವಾಗಿ ಅತ್ಯಂತ ಕೆಳಮಟ್ಟದಲ್ಲಿ ಹಾರಿದ ಪರಿಣಾಮ ಶಾಲೆಯೊಂದರ ಮೇಲ್ಛಾವಣಿಯ ಹೆಂಚುಗಳು ಹಾರಿ ಹಾನಿಗೊಳಗಾದ ಘಟನೆ ಒಕ್ಕಲ್‌ನಲ್ಲಿ ನಡೆದಿದೆ.
ಒಕ್ಕಲ್ ಶ್ರೀನಾರಾಯಣ ಹೈಯರ್ ಸೆಕೆಂಡರಿ ಶಾಲೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಘಟನೆ ಕಳೆದ ರಾತ್ರಿ ನಡೆದಿದೆ. ವಿಮಾನ ಅತ್ಯಂತ ಕೆಳಮಟ್ಟದಲ್ಲಿ ಹಾರಿದ ವೇಳೆ ಉಂಟಾದ ತೀವ್ರ ವಾಯು ಒತ್ತಡ ಹಾಗೂ ಕಂಪನದಿಂದ ಮೇಲ್ಛಾವಣಿಯ ಹೆಂಚುಗಳು ಹಾನಿಗೊಳಗಾಗಿವೆ.
ಘಟನೆ ರಾತ್ರಿ ವೇಳೆ ನಡೆದಿದ್ದರಿಂದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ. ವಿಮಾನ ನಿಲ್ದಾಣದ ಸಮೀಪದ ಜನವಸತಿ ಪ್ರದೇಶಗಳಲ್ಲಿ ಇಂತಹ ಕೆಳಮಟ್ಟದ ಹಾರಾಟದಿಂದ ಈ ಹಿಂದೆಯೂ ಅಪಘಾತ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿರುವುದಾಗಿ ವರದಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಶಾಲಾ ಸಮಯದಲ್ಲಾದರೆ ಮಕ್ಕಳಿಗೆ ಅಪಾಯ ಸಾಧ್ಯತೆಯಿದ್ದು ಮುಂಜಾಗ್ರತಾ ಕ್ರಮ ಪಾಲಿಸಲು ಆದೇಶಿಸಲಾಗಿದೆ.

0 Comments