Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೀದಿ ನಾಯಿಗಳ ಹಾವಳಿ ತೀವ್ರ; ಚೀಲದಲ್ಲಿ ತುಂಬಿಕೊಂಡು ಪಂಚಾಯತ್ ಕಚೇರಿಯೊಳಗೆ ನಾಯಿಗಳನ್ನು ಬಿಟ್ಟು ಪ್ರತಿಭಟನೆ

 

ನಾಸಿಕ್: ಬೀದಿ ನಾಯಿಗಳ ಹಾವಳಿ ವಿರುದ್ಧ ನೀಡಿದ ಹಲವು ದೂರುಗಳಿಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ವಿಶಿಷ್ಟ ರೀತಿಯ ಪ್ರತಿಭಟನೆ ನಡೆದಿದೆ. ನಿಫಾಡ್ ನಗರ ಪಂಚಾಯತ್ ಮುಖ್ಯಾಧಿಕಾರಿಯ ಕಚೇರಿಗೆ ತೆರಳಿದ ಯುವಸೇನೆ ಕಾರ್ಯಕರ್ತರು ಬೀದಿ ನಾಯಿಗಳನ್ನು ಕಚೇರಿಯೊಳಗೆ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಯುವಸೇನೆ ಜಿಲ್ಲಾ ಅಧ್ಯಕ್ಷ ವಿಕ್ರಮ್ ರಣಧಾವೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪಂಚಾಯತ್ ಮುಖ್ಯಾಧಿಕಾರಿ ಧೀರಜ್ ಭಾಂರೆ ಅವರ ಮೇಜಿನ ಮೇಲೆಯೇ ನಾಯಿಗಳನ್ನು ಬಿಡಲಾಗಿದೆ. ಪ್ರತಿಭಟನೆಯ ಭಾಗವಾಗಿ ಮೇಜಿನ ಮೇಲೆ ನೋಟುಗಳ ಮಾಲೆಯನ್ನೂ ಇರಿಸಲಾಯಿತು.

ನಿಫಾಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಲವರಿಗೆ ಬೀದಿ ನಾಯಿಗಳ ಕಡಿತದಿಂದ ಗಾಯಗಳಾಗಿದ್ದರೂ, ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ ಬಳಿಕವೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಬೀದಿ ನಾಯಿಗಳ ಸಂತಾನಹರಣ ಕಾರ್ಯವನ್ನು ತ್ವರಿತಗೊಳಿಸುವುದು ಹಾಗೂ ನಾಯಿಗಳನ್ನು ಹಿಡಿಯುವ ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪ್ರತಿಭಟನಾಕಾರರು ಮುಂದಿಟ್ಟರು. ಗಣೇಶೋತ್ಸವ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಬೀದಿ ನಾಯಿಗಳ ಹಾವಳಿ ಜನರಲ್ಲಿ ಆತಂಕ ಮೂಡಿಸುತ್ತಿದೆ ಎಂದೂ ಅವರು ಹೇಳಿದರು.

ಸಮಸ್ಯೆ ಪರಿಹರಿಸುವ ಬದಲು ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಗಳತ್ತ ಮಾತ್ರ ಗಮನ ಹರಿಸುತ್ತಿದ್ದಾರೆ ಎಂದು ವಿಕ್ರಮ್ ರಣಧಾವೆ ಆರೋಪಿಸಿದರು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಇದೇ ರೀತಿಯ ಪ್ರತಿಭಟನೆಯನ್ನು ಮತ್ತೊಮ್ಮೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

Post a Comment

0 Comments

ಜಾಹೀರಾತು

Responsive Advertisement