Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹೆರಿಗೆ ಬಳಿಕ ವಿಶ್ರಾಂತಿಯಲ್ಲಿದ್ದ ಯುವತಿಯ ಖಾಸಗಿ ದೃಶ್ಯ ಸೆರೆ; ಆರೈಕೆಯ ನೆಪದಲ್ಲಿ ನಿಂತು ನಂಬಿಕೆ ದ್ರೋಹಗೈದ 25ರ ಯುವತಿಯ ಬಂಧನ

ಕಾಸರಗೋಡು : ಹೆರಿಗೆ ಬಳಿಕ ವಿಶ್ರಾಂತಿಯಲ್ಲಿದ್ದ ಯುವತಿಯ ಆರೈಕೆಗೆ ಬಂದಿದ್ದ ಮಹಿಳೆಯೇ ಆಕೆಯ ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸ್‌ಆ್ಯಪ್ ಮೂಲಕ ಹಲವರಿಗೆ ಹಂಚಿಕೊಂಡಿರುವ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ಟೌನ್ ಪೊಲೀಸರು 25 ವರ್ಷದ ಕರ್ನಾಟಕ ಮೂಲದ ಸುಲೈಖಾ ರಾಸಿಯಾಳನ್ನು ಬಂಧಿಸಿದ್ದಾರೆ.

ಕಾಸರಗೋಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ 27 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನ್ನ ಎರಡನೇ ಹೆರಿಗೆಯ ಬಳಿಕ ಆರೈಕೆಗಾಗಿ ಸುಲೈಖಾ ಮನೆಗೆ ಬಂದಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 7ರಿಂದ 20ರ ನಡುವಿನ ಅವಧಿಯಲ್ಲಿ, ಆರೈಕೆಯ ನೆಪದಲ್ಲಿ ರಹಸ್ಯ ಕ್ಯಾಮೆರಾ ಬಳಸಿ ಯುವತಿಯ ಖಾಸಗಿ ದೃಶ್ಯಗಳು ಹಾಗೂ ಫೋಟೋಗಳನ್ನು ಸೆರೆಹಿಡಿದು ಹಲವರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿದೆ. ದೃಶ್ಯಗಳನ್ನು ಪಡೆದವರ ಪೈಕಿ ಆರೋಪಿಯ ಪತಿಯೂ ಇದ್ದ ಎನ್ನಲಾಗಿದೆ.

ಆರೋಪಿಯ ಮೊಬೈಲ್ ಫೋನ್ ಅನ್ನು ಯುವತಿ ಆಕಸ್ಮಿಕವಾಗಿ ಪರಿಶೀಲಿಸಿದಾಗಲೇ ತನ್ನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಹಂಚಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಆಘಾತಕ್ಕೊಳಗಾದ ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಯು ತನ್ನ ಪತಿಯೊಂದಿಗೆ ಸೇರಿ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಳೇ ಎಂಬ ಶಂಕೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಕುರಿತು ಕಾಸರಗೋಡು ಟೌನ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ದೃಶ್ಯಗಳ ಹಂಚಿಕೆ ಹಾಗೂ ಪ್ರಕರಣದಲ್ಲಿ ಇತರರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.

Post a Comment

0 Comments

ಜಾಹೀರಾತು

Responsive Advertisement