ಕಾಸರಗೋಡು : ಕೇರಳವನ್ನು 'ಅತಿದಾರಿದ್ರ್ಯಮುಕ್ತ ರಾಜ್ಯ'ವೆಂದು ಘೋಷಿಸಿರುವ ಸರ್ಕಾರದ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. 2025ರ ನವೆಂಬರ್ 1ರಂದು ಕೇರಳವನ್ನು 'ಅತಿದಾರಿದ್ರ್ಯಮುಕ್ತ ರಾಜ್ಯ'ವೆಂದು ಘೋಷಿಸಲಾಗಿತ್ತು.
ಮಂಜೇಶ್ವರ ಗ್ರಾಮ ಪಂಚಾಯತ್‌ನ 7ನೇ ವಾರ್ಡ್‌ನಲ್ಲಿ ಶಿಥಿಲಗೊಂಡ ಮನೆಯೊಂದರಲ್ಲಿ ವಾಸಿಸುತ್ತಿರುವ ನಿರ್ಗತಿಕ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಇನ್ನೂ ಸುರಕ್ಷಿತ ಮನೆ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಹಲವು ಕುಟುಂಬಗಳು ಬದುಕುತ್ತಿವೆ ಎಂದು ಅಶ್ವಿನಿ ಹೇಳಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಜಲ್ ಜೀವನ್ ಮಿಷನ್ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಇಂತಹ ಕುಟುಂಬಗಳು ಇರುವಾಗ ಕೇರಳವನ್ನು ಅತಿದಾರಿದ್ರ್ಯಮುಕ್ತ ರಾಜ್ಯವೆಂದು ಘೋಷಿಸಿರುವುದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಲೈಫ್ ಮಿಷನ್ ವಸತಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸಾವಿರಾರು ಕುಟುಂಬಗಳ ಕಾಯುವಿಕೆ ಇನ್ನೂ ಮುಂದುವರಿದಿದ್ದು, ಅರ್ಹ ಕುಟುಂಬಗಳಿಗೆ ಸುರಕ್ಷಿತ ಮನೆ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಮತಾ ಸಾಗರ್ ಉಪಸ್ಥಿತರಿದ್ದರು.

0 Comments