Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವೈದ್ಯರ ಬದಲು ಚಾಲಕನೇ ವೈದ್ಯನಾದ ಸರಕಾರಿ ಆಸ್ಪತ್ರೆಯ ದುರಂತ : ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್


ಕಾನ್ಪುರ : ಬಡವರು ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆ ಇದೀಗ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ. ವೈದ್ಯರ ಅನುಪಸ್ಥಿತಿಯಲ್ಲಿ ಆಸ್ಪತ್ರೆಯ ಚಾಲಕನೇ ರೋಗಿಗಳನ್ನು ಪರೀಕ್ಷಿಸಿ, ಔಷಧ ಚೀಟಿ ಬರೆದು, ಔಷಧಗಳನ್ನು ಹೊರಗಿನಿಂದ ಖರೀದಿಸುವಂತೆ ಸೂಚಿಸಿರುವ ಆರೋಪ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.

ಕಾನ್ಶಿ ರಾಮ್ ಜಾಯಿಂಟ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ರಾಮಕೇಶ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈದ್ಯರ ಅನುಪಸ್ಥಿತಿಯನ್ನೇ ಅವಕಾಶವನ್ನಾಗಿ ಮಾಡಿಕೊಂಡ ಚಾಲಕ, ಹೊರರೋಗಿ ವಿಭಾಗಕ್ಕೆ ಬಂದಿದ್ದ ರೋಗಿಗಳನ್ನು ಪರೀಕ್ಷಿಸಲು ಮುಂದಾಗಿದ್ದಾನೆ.

ಈ ದೃಶ್ಯವನ್ನು ದಾಖಲಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಆಸ್ಪತ್ರೆಯ ಅವ್ಯವಸ್ಥೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ವಿಡಿಯೋದಲ್ಲಿ ಚಾಲಕ ರೋಗಿಗಳನ್ನು ಒಳಗೆ ಕರೆದು ಅವರ ಆರೋಗ್ಯ ಸಮಸ್ಯೆಗಳನ್ನು ವಿಚಾರಿಸುವುದು, ಬಳಿಕ ಔಷಧ ಚೀಟಿ ಬರೆದುಕೊಡುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ ಔಷಧ ಲಭ್ಯವಿಲ್ಲವೆಂದು ಹೇಳಿ ಹೊರಗಿನಿಂದಲೇ ಔಷಧ ಖರೀದಿಸುವಂತೆ ರೋಗಿಗಳಿಗೆ ಸೂಚಿಸಿರುವುದೂ ವಿಡಿಯೋದಲ್ಲಿ ದಾಖಲಾಗಿದೆ.

ರೋಗಿಗಳ ಆರೋಗ್ಯದ ಹೊಣೆ ಹೊತ್ತು ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲೇ ವೈದ್ಯರ ಬದಲು ಚಾಲಕನಿಂದ ವೈದ್ಯಕೀಯ ಸೇವೆ ನಡೆದಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈದ್ಯಕೀಯ ಜ್ಞಾನ ಮತ್ತು ಅರ್ಹತೆ ಇಲ್ಲದ ವ್ಯಕ್ತಿಯೊಬ್ಬರು ರೋಗಿಯ ಆರೋಗ್ಯದ ಕುರಿತು ನಿರ್ಧಾರ ತೆಗೆದುಕೊಳ್ಳಲು ಅವಕಾಶ ಸಿಕ್ಕಿದ್ದು ಹೇಗೆ ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆಯಾಗಿದೆ.

ಬುಧವಾರ ಮಧ್ಯಾಹ್ನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಆಸ್ಪತ್ರೆ ಆಡಳಿತ ಎಚ್ಚೆತ್ತುಕೊಂಡಿದೆ. ಘಟನೆ ಕುರಿತು ವೈದ್ಯ ರಾಮಕೇಶ್ ಅವರಿಂದ ವಿವರಣೆ ಕೇಳಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಪಿಯೂಷ್ ಮಿಶ್ರಾ ತಿಳಿಸಿದ್ದಾರೆ.

ಚಾಲಕ ಔಷಧ ಚೀಟಿ ನೀಡಿದ್ದನ್ನು ವೈದ್ಯ ರಾಮಕೇಶ್ ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಗೆ ಬಂದಿದ್ದ ರೋಗಿ ತಮ್ಮ ಪರಿಚಯಸ್ಥರಾಗಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಚಾಲಕನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಒಬ್ಬ ಚಾಲಕನನ್ನು ಕೆಲಸದಿಂದ ತೆಗೆದುಹಾಕುವುದರಿಂದ ಮಾತ್ರ ಪ್ರಶ್ನೆಗಳು ಮುಗಿಯುವುದಿಲ್ಲ. ವೈದ್ಯರ ಅನುಪಸ್ಥಿತಿಯಲ್ಲಿ ರೋಗಿಗಳ ಸುರಕ್ಷತೆಯನ್ನು ಯಾರು ನೋಡಿಕೊಳ್ಳಬೇಕು? ಅರ್ಹತೆ ಇಲ್ಲದ ವ್ಯಕ್ತಿ ರೋಗಿಗಳನ್ನು ಪರೀಕ್ಷಿಸುವವರೆಗೆ ಆಸ್ಪತ್ರೆಯ ಮೇಲ್ವಿಚಾರಣಾ ವ್ಯವಸ್ಥೆ ಏನು ಮಾಡುತ್ತಿತ್ತು? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಬಡ ಹಾಗೂ ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬಿ ಚಿಕಿತ್ಸೆಗಾಗಿ ಬರುವ ಸಂದರ್ಭದಲ್ಲಿ ಇಂತಹ ಘಟನೆಗಳು ಆರೋಗ್ಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಅಲುಗಾಡಿಸುವಂತಿವೆ. ರೋಗಿಯ ಜೀವದೊಂದಿಗೆ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೂ ಅವಕಾಶ ಇರಬಾರದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Post a Comment

0 Comments

ಜಾಹೀರಾತು

Responsive Advertisement