ಮಂಗಳೂರು : ನಗರದ ಕರಂಗಲಪಾಡಿಯ ಕೋರ್ಟ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಕಾರು, ಗೂಡ್ಸ್ ಆಟೋ ಹಾಗೂ ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿದ್ದಾರೆ.
ಕೋರ್ಟ್ ರಸ್ತೆಯ ಇಳಿಜಾರಿನಲ್ಲಿ ಗೂಡ್ಸ್ ಆಟೋ ಸಂಚರಿಸುತ್ತಿದ್ದ ವೇಳೆ, ಕರಂಗಲಪಾಡಿ ಕಡೆಯಿಂದ ಕೋರ್ಟ್ ರಸ್ತೆಗೆ ಪ್ರವೇಶಿಸುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸಮೀಪದಲ್ಲಿದ್ದ ದ್ವಿಚಕ್ರ ವಾಹನವೂ ಅಪಘಾತಕ್ಕೆ ಸಿಲುಕಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಗೂಡ್ಸ್ ಆಟೋ ಚಾಲಕ ಗಾಯಗೊಂಡಿದ್ದು, ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಕ್ಕಿಯ ತೀವ್ರತೆಗೆ ಕಾರು, ಗೂಡ್ಸ್ ಆಟೋ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿವೆ. ಮಾಹಿತಿ ತಿಳಿದು ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 Comments