ಕಣ್ಣೂರು : ‘ಆಪರೇಷನ್ ಥಂಡರ್’ ಕಾರ್ಯಾಚರಣೆಯ ಭಾಗವಾಗಿ ಮಟ್ಟನ್ನೂರಿನಲ್ಲಿ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ 2.809 ಗ್ರಾಂ ಎಂಡಿಎಂಎ ಮಾದಕ ವಸ್ತುಗಳ ಸಹಿತ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಲಪ್ಪುರ ಪುತುಪೊನ್ನಾನಿ ನಿವಾಸಿ ಡಾ. ಇರ್ಷಾದ್ ಎಚ್.ಎ. (33) ಹಾಗೂ ತಲಶ್ಶೇರಿ ವಡಕ್ಕುಂಬಾಡ್ ಕೂಲಿ ಬಜಾರ್ ನಿವಾಸಿ ಡಾ. ಸಿದ್ಧಾರ್ಥ್ ಸಿ.ಪಿ. (31) ಎಂದು ಗುರುತಿಸಲಾಗಿದೆ.
ಅಬಕಾರಿ ಆಯುಕ್ತರ ಸ್ಕ್ವಾಡ್‌ಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ಇರಿಟ್ಟಿ ಅಬಕಾರಿ ವೃತ್ತ ನಿರೀಕ್ಷಕ ಸಿ. ರಜಿತ್ ನೇತೃತ್ವದಲ್ಲಿ ಮಡನ್ನೂರಿನ ಸ್ಕೈ ಪ್ಯಾಲೆಸ್ ಬಾರ್‌ನ ಕೊಠಡಿ ಹಾಗೂ ಆರೋಪಿಗಳು ಬಳಸುತ್ತಿದ್ದ ಐಷಾರಾಮಿ ಥಾರ್ ಜೀಪ್‌ನಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ 2.809 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅಧಿಕಾರಿಗಳು ವಶಪಡಿಸಿಕೊಂಡರು.
ಬಂಧಿತರಲ್ಲಿ ಒಬ್ಬರು ಬೆಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬರು ಕಣ್ಣೂರಿನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ವಿಚಾರಣೆಯಲ್ಲಿ ಎಂಡಿಎಂಎಯನ್ನು ಬೆಂಗಳೂರಿನಿಂದ ಖರೀದಿಸಿರುವುದಾಗಿ ಆರೋಪಿಗಳು ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅಬಕಾರಿ ನಿರೀಕ್ಷಕ ಪಿ. ಅಬ್ದುಲ್ ಬಶೀರ್, ಅಬಕಾರಿ ಆಯುಕ್ತರ ಸ್ಕ್ವಾಡ್‌ನ ಪಿ. ಜಲೀಶ್, ಕೆ. ಬಿನೀಶ್, ಪ್ರಿವೆಂಟಿವ್ ಆಫೀಸರ್ ಗ್ರೇಡ್-ಸಿ ಹನಿ ಸೇರಿದಂತೆ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳನ್ನು ಜೆಎಫ್‌ಸಿಎಂ ಮಟ್ಟನ್ನೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಮುಂದಿನ ಕಾನೂನು ಕ್ರಮಗಳು ವಡಕರ ನಾರ್ಕೋಟಿಕ್ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

0 Comments