ನವದೆಹಲಿ : ಕ್ಯಾನ್ಸರ್ ಚಿಕಿತ್ಸೆಯ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮಹತ್ವದ ಪರಿಹಾರ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) 137 ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶಕ್ಕೆ ಶೇ. 30ರ ಮಿತಿ ವಿಧಿಸಿದೆ. ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರ (MRP) 2026ರ ನವೆಂಬರ್ 9ರಿಂದ ಜಾರಿಗೆ ಬರಲಿದೆ.
ಈ ಕ್ರಮದಿಂದ ಕೆಲವು ಔಷಧಗಳ ಬೆಲೆ ಶೇ. 70ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇದರಿಂದ ಗ್ರಾಹಕರಿಗೆ ವಾರ್ಷಿಕ ಸುಮಾರು 2,500 ಕೋಟಿ ರೂ. ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ. ಪೆಂಬ್ರೊಲಿಜುಮಾಬ್ (Pembrolizumab), ರಿಬೊಸಿಕ್ಲಿಬ್ (Ribociclib) ಮತ್ತು ಅಬೆಮಾಸಿಕ್ಲಿಬ್ (Abemaciclib) ಸೇರಿದಂತೆ ಪೇಟೆಂಟ್ ಹೊಂದಿರುವ ಔಷಧಗಳೂ ಈ ಪಟ್ಟಿಯಲ್ಲಿ ಸೇರಿವೆ.
ಸಗಟು ವಿತರಕರು ಅಥವಾ ಆಸ್ಪತ್ರೆಗಳಿಗೆ ಔಷಧಗಳನ್ನು ಮಾರಾಟ ಮಾಡುವಾಗ ಆರಂಭಿಕ ಮಾರಾಟ ಹಂತದ ಬೆಲೆಯ ಮೇಲೆ ಶೇ. 30ಕ್ಕಿಂತ ಹೆಚ್ಚು ಲಾಭಾಂಶ ವಿಧಿಸುವಂತಿಲ್ಲ ಎಂದು ಹೊಸ ಆದೇಶದಲ್ಲಿ ಸೂಚಿಸಲಾಗಿದೆ. ಔಷಧ ತಯಾರಕರು ಏಳು ದಿನಗಳೊಳಗೆ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಎನ್ಪಿಪಿಎಗೆ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.
ಔಷಧಗಳ ಉತ್ಪಾದನಾ ವೆಚ್ಚ ಮತ್ತು ರೋಗಿಗಳು ಪಾವತಿಸುವ ಬೆಲೆಯ ನಡುವಿನ ಅತಿಯಾದ ವ್ಯತ್ಯಾಸವನ್ನು ಕಡಿಮೆ ಮಾಡುವುದು ಈ ಬೆಲೆ ನಿಯಂತ್ರಣದ ಉದ್ದೇಶವಾಗಿದೆ. ಎನ್ಪಿಪಿಎ ನಡೆಸಿದ ಮೌಲ್ಯಮಾಪನದಲ್ಲಿ, ಬೆಲೆ ನಿಯಂತ್ರಣಕ್ಕೆ ಒಳಪಡದ ಕೆಲವು ಕ್ಯಾನ್ಸರ್ ಔಷಧಗಳ ವ್ಯಾಪಾರ ಲಾಭಾಂಶ ಸರಾಸರಿ ಶೇ. 170ರಷ್ಟಿದ್ದು, ಕೆಲವು ಸಂದರ್ಭಗಳಲ್ಲಿ ಶೇ. 700ರವರೆಗೂ ತಲುಪಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಔಷಧಗಳ ಬೆಲೆಯ ಮೇಲಿನ ಅತಿಯಾದ ಲಾಭಾಂಶವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ಕ್ಯಾನ್ಸರ್ ತಜ್ಞರು ಮತ್ತು ವೈದ್ಯಕೀಯ ಪರಿಣತರ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಔಷಧ ತಯಾರಕರು ಪರಿಷ್ಕೃತ ದರಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಪ್ರಕಟಿಸಬೇಕು. ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳು ಹೊಸ ದರದಲ್ಲೇ ಔಷಧಗಳನ್ನು ಮಾರಾಟ ಮಾಡಬೇಕು ಹಾಗೂ ಪರಿಷ್ಕೃತ ಬೆಲೆಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.
ಗ್ರಾಹಕರು ಕ್ಯಾನ್ಸರ್ ಔಷಧಗಳ ಹೊಸ ದರಗಳನ್ನು ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು.

0 Comments