ಕಾಸರಗೋಡು: ಜಿಲ್ಲೆಯಲ್ಲಿನ ತೀವ್ರ ವೈದ್ಯರ ಕೊರತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರುವ ವೈದ್ಯರಿಗೆ ಕಾಸರಗೋಡು ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ನೇಮಕಾತಿ ಪಡೆಯಲು ಅವಕಾಶ ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕಾಸರಗೋಡು ಘಟಕ ಆಗ್ರಹಿಸಿದೆ.
ಐಎಂಎ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಾಸರಗೋಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇರಳ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರುವ ವೈದ್ಯರ ಕೊರತೆಯೇ ಪ್ರಮುಖ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನೋಂದಾಯಿತ ವೈದ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಅದೇ ರೀತಿ, ಖಾಸಗಿ ಆಸ್ಪತ್ರೆಗಳಲ್ಲಿಯೂ ಮಂಗಳೂರಿನಿಂದ ತಜ್ಞ ಹಾಗೂ ಅತಿ ವಿಶೇಷ ತಜ್ಞ ವೈದ್ಯರು ವಿಸಿಟಿಂಗ್ ವೈದ್ಯರಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡಿರುವ ವೈದ್ಯರಿಗೆ ಕಾಸರಗೋಡಿನಲ್ಲಿ ಸೇವೆ ಸಲ್ಲಿಸಲು ಅನುಮತಿ ನೀಡಿದರೆ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿನ ವೈದ್ಯರ ಕೊರತೆಯನ್ನು ನೀಗಿಸಲು ಸಹಕಾರಿಯಾಗಲಿದೆ ಎಂದು ಐಎಂಎ ತಿಳಿಸಿದೆ.
ಸಭೆಯನ್ನು ಐಎಂಎ ರಾಜ್ಯಾಧ್ಯಕ್ಷ ಡಾ. ಎಂ.ಎನ್. ಮೆನನ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷೆ ಡಾ. ರೇಖಾ ರೈ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಡಾ. ರಾಯ್ ಆರ್. ಚಂದ್ರನ್ ಮುಖ್ಯ ಅತಿಥಿಯಾಗಿದ್ದರು.
ಘಟಕದ ಕಾರ್ಯದರ್ಶಿ ಡಾ. ಅಣ್ಣಪ್ಪ ಕಾಮತ್ ವಾರ್ಷಿಕ ವರದಿ ಹಾಗೂ ಖಜಾಂಚಿ ಡಾ. ಸುಂದರ್ ಆನ ಮಜಲ್ ಲೆಕ್ಕಪತ್ರ ವರದಿ ಮಂಡಿಸಿದರು.
ಮಾಜಿ ರಾಜ್ಯಾಧ್ಯಕ್ಷ ಹಾಗೂ ಇಮೇಜ್ ಸಮಿತಿ ಅಧ್ಯಕ್ಷ ಡಾ. ಜೋಸೆಫ್ ಬೆನವನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ನಾರಾಯಣ ನಾಯಕ್, ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಜನಾರ್ದನ ನಾಯಕ್, ಸಂಚಾಲಕ ಡಾ. ಕಾಸಿಂ ಟಿ., ಡಾ. ಹರಿ ಕಿರಣ್ ಬಂಗೇರ, ವಿಮಾ ಸಂಚಾಲಕಿ ಡಾ. ಸುಧಾ ಭಟ್, ಡಾ. ಭರತನ್ ಎ.ವಿ. ಹಾಗೂ ಕಾಞಂಗಾಡ್ ಘಟಕದ ಅಧ್ಯಕ್ಷ ಡಾ. ಕಣ್ಣನ್ ಉಪಸ್ಥಿತರಿದ್ದರು.
ಹೊಸ ಸಂಘಟನಾ ವರ್ಷದ ಪದಾಧಿಕಾರಿಗಳು ಸಭೆಯಲ್ಲಿ ಅಧಿಕಾರ ಸ್ವೀಕರಿಸಿದರು. ಐಎಂಎ ಕಾಸರಗೋಡು ಘಟಕದ ಮಾಜಿ ಅಧ್ಯಕ್ಷ ಡಾ. ಹರಿ ಕಿರಣ್ ಟಿ. ಬಂಗೇರ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಡಾ. ಮಹಿನ್ ಪಿ. ಅಬ್ದುಲ್ಲ ವಂದಿಸಿದರು.
ನೂತನ ಪದಾಧಿಕಾರಿಗಳಾಗಿ ಡಾ. ಜಮಾಲ್ ಅಹ್ಮದ್ ಎ.(ಅಧ್ಯಕ್ಷರು), ಡಾ. ಸುಂದರ್ ಆನ ಮಜಲ್, ಡಾ. ನಬೀಸಾ ಪಿ.ಕೆ.(ಉಪಾಧ್ಯಕ್ಷರು), ಡಾ. ಮಹಿನ್ ಪಿ. ಅಬ್ದುಲ್ಲ (ಕಾರ್ಯದರ್ಶಿ), ಡಾ. ವಿವೇಕ್ ಕೃಷ್ಣ(ಜಂಟಿ ಕಾರ್ಯದರ್ಶಿ), ಡಾ. ಗೋಪಿ ವಿ.(ಖಜಾಂಚಿ), ಡಾ. ಬಿ. ನಾರಾಯಣ ನಾಯಕ್(ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.

0 Comments