ಪೆರ್ಲ : ಶಾಂತಿ ಎಂಬ ಮರದ ಸಣ್ಣ ಬೀಜ ಭಕ್ತಿ ಮನಶಾಂತಿ ಎಂಬ ದೊಡ್ಡ ಮರದ ಬೀಜದಲ್ಲಿ ಎಲ್ಲವೂ ಅಡಗಿದೆ. ಕಾಯಾ ವಾಚಾ ಮನಸಾ ತ್ರಿಕರಣ ಶುದ್ಧಿಗೆ ಭಜನಾ ಕಮ್ಮಟ ದೊಡ್ಡ ಆಸ್ತಿ. ಏಕಾಗ್ರತೆಯಿಂದ ಭಗವಂತನ ಗುಣಗಾನವನ್ನು ಮಾಡಿದರೆ ಮನಸ್ಸು ಶುದ್ಧಿ. ಉತ್ತಮ ವಿಚಾರಗಳಿಂದ ಪ್ರಭಾವಿತವಾದ ಮನಸ್ಸು ತನ್ನ ಶಾಂತಿಯೊಂದಿಗೆ ಇತರರ ಮನಸ್ಸನ್ನು ಶುದ್ಧೀಕರಿಸುತ್ತದೆ. ಲೋಕವನ್ನೂ ಶಾಂತಗೊಳಿಸುತ್ತದೆ. ಜಗತ್ ಕಲ್ಯಾಣವನ್ನು ಬಯಸಿದ ಋಷಿ ಮುನಿಗಳು, ಸಾಧು ಸಂತರು ವೇದಾಂತ ಔಷಧಿಯನ್ನು ಜೇನಿನಲ್ಲಿ ಬೆರೆಸಿ ಕೊಡುವಂತೆ ಭಜನೆಯು ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ಕೊಂಡೇವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ವಾಣಿನಗರದ ಶ್ರೀಕಷ್ಣ ಭಜನಾ ಮಂದಿರದಲ್ಲಿ ನಡೆದ ಭಜನಾ ಕಮ್ಮಟ ಆಯೋಜನಾ ಸಮಿತಿ ಎಣ್ಮಕಜೆ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಂಜೇಶ್ವರ ವಲಯದ ಜಂಟಿ ಆಶ್ರಯದಲ್ಲಿ ವಾಣಿನಗರ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ 'ಭಜನಾ ಕಮ್ಮಟ'ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇದೇ ವೇಳೆ, ಗೋವಧೆ ನಿಷೇಧ ಕಾಯಿದೆ ಜಾರಿಗೆ ತರುವಂತೆ ಆಗ್ರಹಿಸಿ ಸಾಮೂಹಿಕ ಸಹಿ ಅಭಿಯಾನ ನಡೆಸಿ ಶ್ರೀಗಳಿಗೆ ಹಸ್ತಾಂತರಿಸಲಾಯಿತು. ಆಯೋಜನಾ ಸಮಿತಿ ಅಧ್ಯಕ್ಷ, ದಾಸ ಸಂಕೀರ್ತನೆಗಾರ ರಾಮಕೃಷ್ಣ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಖ್ಯಾತ ಗಾಯಕ ಹಾಗೂ ಭಜನಾ ತರಬೇತುದಾರರಾದ ಶಂಕರ್ ಶಾನುಭೋಗ್ ಮಾತನಾಡಿ, ಭಜನೆಯು ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತ. ಧರ್ಮಸ್ಥಳ ವಿರೇಂದ್ರ ಹೆಗಡೆಯವರು ಬಿತ್ತಿದ ಬೀಜ ಈ ಭಜನಾ ಕಮ್ಮಟ. ಸಮಾಜದಲ್ಲಿ ನೆಮ್ಮದಿಯಿಂದಿರಲು ಬಯಸುತ್ತೇವೆ. ನೈತಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಮೀಯಪದವು ಸಾಮರಸ್ಯದ ಬದುಕಿಗೆ ಭಜನಾ ಕಮ್ಮಟಗಳ, ಸಮಾಜಕ್ಕಾಗಿ ಸಮಯ ಕೊಟ್ಟರೆ ಸಮಾಜದ ಋಣ ಸಂದಾಯ ಮಾಡಿದರೆ ಸಂಸ್ಕೃತಿ ಉಳಿವು ಸಾಧ್ಯ ಎಂದರು.
ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು, ಧಾರ್ಮಿಕ ಮುಖಂಡ ಬಿ.ವೆಂಕಟರಮಣ ಕುಂಜತ್ತಾಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು. ಸುಮಿತ್ ರಾಜ್ ಎ.ಸಿ. ವರದಿ ಮಂಡಿಸಿದರು. ಸುರೇಶ್ ವಾಣೀನಗರ ನಿರೂಪಿಸಿ, ಪುನೀತ್ ಕೆ.ಎಸ್. ವಾಣೀನಗರ ವಂದಿಸಿದರು 57 ಭಜನಾ ಸಂಘ, 250 ಸದಸ್ಯರು, ಎರಡು ದಿನಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.

0 Comments