ಬದಿಯಡ್ಕ: ಶೈಕ್ಷಣಿಕ ಯಶಸ್ವಿಗಾಗಿ ವಿದ್ಯಾರ್ಥಿಗಳು ಯೋಜನೆಗಳನ್ನು ಸಿದ್ಧ ಪಡಿಸಿಕೊಳ್ಳಬೇಕು. ಗುರುಗಳ ಸಹಕಾರದಲ್ಲಿ ಉದ್ದೇಶ ಹಾಗೂ ಗುರಿಯ ಕಡೆಗೆ ನಿಖರ ಸಾಧನೆ ಮಾಡಬೇಕು. ಯುವಪ್ರತಿಭೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ, ಅರಿವು ಮೂಡಿಸುವುದೇ ಈ ಪರಿಷತ್ತಿನ ಗುರಿ' ಎಂದು ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಹೇಳಿದರು. ಅವರು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರದಂದು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ಕೆ ವಾಮನ್ ರಾವ್ ಬೇಕಲ್ ಅವರ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ 'ಆರಿವು' ಶೈಕ್ಷಣಿಕ ಮಾರ್ಗದರ್ಶಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲ ಡಾ. ಬೇ. ಸೀ ಗೋಪಾಲಕೃಷ್ಣ ಭಟ್ ವಹಿಸಿದ್ದರು. ಡಾ. ಕೆ ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಕೆ. ಸತ್ಯನಾರಾಯಣ ತಂತ್ರಿ ಅವರು, ಎಸ್ಎಸ್ಎಲ್ ಸಿ ನಂತರದ ಶಿಕ್ಷಣದ ವಿವಿಧ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಶ್ರೀ ಭಾರತೀ ವಿದ್ಯಾಪೀಠದ ಪಿಟಿಎ ಅಧ್ಯಕ್ಷ ಅನಂತಕೃಷ್ಣ ಚಡಗ, ಶ್ರೀ ಭಾರತೀ ವಿದ್ಯಾಪೀಠದ ಗುರುಗಳಾದ ಸರೋಜಾ ಟೀಚರ್, ಗಣೇಶ್ ಇದ್ದರು. ಕಾರ್ಯಕ್ರಮದಲ್ಲಿ ಕೆ ಸತ್ಯನಾರಾಯಣ ತಂತ್ರಿ ಹಾಗೂ ಅನಂತಕೃಷ್ಣ ಚಡಗ ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಶಾರದಾ ಎಸ್ ಭಟ್ ಕಾಡಮನೆ ಪ್ರಾರ್ಥನೆ ಹಾಡಿದರು. ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ವಂದಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅನೇಕ ಮಂದಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.
0 Comments