ಕಾಸರಗೋಡು : ಬೇಕಲ ಉತ್ಸವಕ್ಕೆ ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಇಂದಿನಿಂದ ಸ್ವತಃ ಬೇಕಲ ಬೀಚ್ ಪಾರ್ಕ್ ನಲ್ಲಿ ಮೊಕ್ಕಾಂ ಹೂಡಿ ಹೊಸ ವರ್ಷದಂದು ಜನಸಂದಣಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಿದ್ದಾರೆ. ಉತ್ಸವ ನಡೆಯುವ ಉದ್ಯಾನವನ ಹಾಗೂ ಸುತ್ತಮುತ್ತ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದೂ ತಿಳಿಸಲಾಗಿದೆ. ಸೋಮವಾರ ರಾತ್ರಿ ರಾಪರ್ ಗಾಯಕ ವೇಡನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಸಂಘಟನಾ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಕಾರ್ಯಕ್ರಮಕ್ಕೆ ಗೆಳೆಯನ ಜತೆ ಬರುತ್ತಿದ್ದ ವೇಳೆ ರೈಲಿಗೆ ಸಿಲುಕಿ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ ಬೇಸರ ತಂದಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ,ಶಾಸಕ ಸಿ.ಎಚ್.ಕುಂಞಂಬು ಹೇಳಿದ್ದಾರೆ. ವೇಡನ್ ಅವರ ಕಾರ್ಯಕ್ರಮಕ್ಕೆ ಜನಸಾಗರವೇ ನೆರೆದಿತ್ತು. ಅದರಂತೆ ಬೀಚ್ ನಲ್ಲಿ ಸೌಲಭ್ಯ, ಭದ್ರತೆ ಒದಗಿಸಲಾಗಿತ್ತು. ನೂಕು ನುಗ್ಗಲು ಉಂಟಾಗಿ ಆರು ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅವರು ರಾತ್ರಿ ಆಸ್ಪತ್ರೆಯಿಂದ ಹೊರಟರು. ಬೀಚ್ ಫೆಸ್ಟ್‌ನ 10 ದಿನಗಳು ಯಾವುದೇ ಚಿಂತೆ ಅಥವಾ ಸಮಸ್ಯೆಗಳಿಲ್ಲದೆ ಕಳೆದವು. ಬೀಚ್ ಫೆಸ್ಟ್‌ಗೆ ಭೇಟಿ ನೀಡುವವರು ರೈಲು ಹಳಿಗಳನ್ನು ದಾಟದಂತೆ ನಿರಂತರವಾಗಿ ಎಚ್ಚರಿಕೆ ವಹಿಸುತ್ತಿದ್ದಾರೆ. ಎಲ್ಲಾ ದಾರಿಗಳಲ್ಲೂ ಸುರಕ್ಷಿತ ಮಾರ್ಗದ ಮೂಲಕ ಬೀಚ್‌ಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಉತ್ಸವದ ಸ್ವಾಗತ ಸಮಿತಿ ತಿಳಿಸಿದೆ.
0 Comments