ಕಾಸರಗೋಡು: ಅಶ್ವಿನಿ ನಗರದ ಹೊಟೇಲೊಂದರ ಮುಂಭಾಗದಿಂದ ಯುವಕನೋರ್ವನನ್ನು ಹಾಡುಹಗಲೇ ಆಂದ್ರ ಪ್ರದೇಶದ ನೋಂದಾವಣೆಯ ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿದ ಘಟನೆ ನಿನ್ನೆ ಅಪರಾಹ್ನ ಮೂರು ಗಂಟೆಗೆ ನಡೆದಿತ್ತು. ಹೋಟೆಲ್ ನ ಸೆಕ್ಯೂರಿಟಿ ಗಾರ್ಡ್ ಮತ್ತು ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಅಪಹರಣಕ್ಕೊಳಗಾದ ವ್ಯಕ್ತಿ ಮೇಲ್ಪರಂಬ ಮೂಲದ ಹನೀಫಾ ಎಂದು ಮಾಹಿತಿ ಕಲೆ ಹಾಕಿದ್ದರು. ಆರಂಭದಲ್ಲಿ ಯಾವುದೇ ದೂರು ಇಲ್ಲದ ಕಾರಣ ಪೊಲೀಸರು ಹಿಂಜರಿದರು, ಆದರೆ ಇದು ಗಂಭೀರ ಪ್ರಕರಣವಾದ್ದರಿಂದ, ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಅವರ ಸೂಚನೆಯ ಮೇರೆಗೆ ಪೊಲೀಸರು ಜಾಗರೂಕರಾಗಿದ್ದರು. ಅಪಹರಿಸಲಾದ ಕಾರಿನ ಸಂಖ್ಯೆಯನ್ನು ಪಡೆದ ನಂತರ, ಮಾಹಿತಿಯನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿತ್ತು. ಬಳಿಕ ಸಂಜೆ ವೇಳೆಗೆ ಕರ್ನಾಟಕ ಪೊಲೀಸರ ಸಹಾಯದಿಂದ ಹಾಸನದ ಸಕಲೇಶಪುರದಲ್ಲಿ ಈ ತಂಡವನ್ನು ಬಂಧಿಸಲಾಗಿದೆ. ಕಾರಿನಲ್ಲಿ ಆಂಧ್ರ ಮೂಲದ ಐವರು ಇದ್ದರೆನ್ನಲಾಗಿದೆ. ಅಪಹರಣದ ಹಿಂದೆ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ವಿಷಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆಂಧ್ರ ಮೂಲದವರು ಮೂರು ದಿನಗಳ ಕಾಲ ಕಾಸರಗೋಡಿನಲ್ಲಿ ತಂಗಿದ್ದು ಬಳಿಕ ಅಪಹರಣ ನಡೆಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

0 Comments