ಕುಂಬಳೆ: ತ್ರಿಸ್ತರ ಪಂಚಾಯತ್ ಚುನಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಶಿರಿಯಾದಲ್ಲಿ ಎಲ್ಡಿಎಫ್-ಯುಡಿಎಫ್ ನಡುವೆ ಬುಧವಾರ ರಾತ್ರಿ ಘರ್ಷಣೆ ಉಂಟಾಗಿದ್ದು ಕುಂಬಳೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿಓರ್ವ ಎಲ್ಡಿಎಫ್ ಕಾರ್ಯಕರ್ತನನ್ನು ಬಂಧಿಸಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದ ಎರಡೂ ಕಡೆಯಿಂದ ಎರಡು ಕಾರುಗಳನ್ನು ವಶಪಡಿಸಿದ್ದಾರೆ. ಕುಂಬಳೆ ಪೊಲೀಸರು ದಾಖಲಿಸಿರುವ ಪ್ರಕರಣದ ಪ್ರಕಾರ, ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಘರ್ಷಣೆ ನಡೆದಿದ್ದು, ಶಿರಿಯಾ ಮಸೀದಿ ಬಳಿ ಕಾರು ನಿಲ್ಲಿಸಿದ್ದ ಎಲ್ಡಿಎಫ್ ಕಾರ್ಯಕರ್ತ ಶಿರಿಯಾ ನೌಫಲ್ ಮಂಜಿಲ್ನ ಮುಹಮ್ಮದ್ ಇಕ್ಬಾಲ್ (38) ಅವರನ್ನು ಕಬ್ಬಿಣದ ರಾಡ್ನಿಂದ ಹೊಡೆದ ಆರೋಪವಿದೆ. ಈ ಪ್ರಕರಣದಲ್ಲಿ ಯುಡಿಎಫ್ ನ ಸಿದ್ದಿಕ್ ಮುಹಮ್ಮದ್, ಅಶ್ರಫ್ ಅಬ್ದುಲ್ಲಾ ಮತ್ತು ಅಬ್ದುಲ್ ಖಾದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ರಾತ್ರಿ 8:30 ಕ್ಕೆ, ಶಿರಿಯಾ ಅಶ್ರಫ್ ಮಂಜಿಲ್ನ ಮುಹಮ್ಮದ್ ಅಶ್ರಫ್ (45) ಮತ್ತು ಕುಂಜಾಲಿ ಮಂಜಿಲ್ನ ಅಬೂಬಕರ್ ಸಿದ್ದಿಕ್ ಅವರ ಮೇಲೆ ಹಲ್ಲೆ ನಡೆಸಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಅವರ ಕಾರನ್ನು ನಾಶಮಾಡಲು ಯತ್ನಿಸಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ಶಿರಿಯಾದ ಇಕ್ಬಾಲ್ ಮತ್ತು ಹಮೀದ್ ಚೋಟು ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಹಮೀದ್ ಚೋಟು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯಿಂದಾಗಿ ದೂರುದಾರರ ಕಾರಿಗೆ 50 ಸಾವಿರ ರೂಪಾಯಿಯಷ್ಟು ನಾಶ ನಷ್ಟ ಸಂಭವಿಸಿದೆ ಎಂದು ಪ್ರಕರಣದಲ್ಲಿ ಹೇಳಲಾಗಿದೆ.

0 Comments