Ticker

6/recent/ticker-posts

Ad Code

ಮಲ್ಪೆ ಕಡಲ ತೀರದಲ್ಲಿ ದ್ವಾರ ಪಾಲಕನ ಮೂರ್ತಿ ಪತ್ತೆ : ಕೃಷ್ಣನ ಮೂರ್ತಿಯೆಂದು ವಿಡಿಯೋ ವೈರಲ್

 

ಉಡುಪಿ: ಮಲ್ಪೆ ಕಡಲ ತೀರದಲ್ಲಿ ನದಿಗೆ ಬಿಟ್ಟ ದ್ವಾರ ಪಾಲಕನ ಮೂರ್ತಿಯೊಂದು ಪತ್ತೆಯಾಗಿದ್ದು  ಇದನ್ನು ಕಂಡ ಕೃಷ್ಣ ಭಕ್ತರು  ಪವಾಡ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಭಾನುವಾರ ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮ ಇತ್ತು. ಸಾವಿರಾರು ಜನ ಇಸ್ಕಾನ್ ಅನುಯಾಯಿಗಳು ಮಠಕ್ಕೆ ಬಂದಿದ್ದು, ಸಂಜೆ ಮಲ್ಪೆ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಕಡಲಲ್ಲಿ ತೇಲಿ ಬಂದು ದಡದಲ್ಲಿ ಸಿಕ್ಕಿದ ವಿಗ್ರಹವೊಂದು ಎಲ್ಲರ ಗಮನ ಸೆಳೆಯಿತು. ಅಲ್ಲಿ ಸೇರಿದ್ದ ಸಾವಿರಾರು ಮಂದಿ ಆ ವಿಗ್ರಹವನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದರು. ಉಡುಪಿಯ  ಶ್ರೀಕೃಷ್ಣ ದೇವರು ಕೂಡ ಕಡಲಲ್ಲೇ ಲಭ್ಯವಾದ ಕಾರಣ, ಇಸ್ಕಾನ್ ಭಕ್ತರು ಅದೇ ಪವಾಡ ಮತ್ತೊಮ್ಮೆ ಸಂಭವಿಸಿದೆ ಎಂದು ಕುಣಿದು ಕುಪ್ಪಳಿಸಿದರು. ಅಲ್ಲಿ ಸೇರಿದ್ದ ಸಾವಿರಾರು ಇಸ್ಕಾನ್ ಭಕ್ತರು ಆ ವಿಗ್ರಹವನ್ನು ಕೃಷ್ಣನೆಂದೇ ಭಾವಿಸಿ ಇಲ್ಲಿಂದ ಬೆಂಗಳೂರಿಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದ್ದರು.

ಕರಾವಳಿ ಭಾಗದ ದೇಗುಲಗಳ ಪ್ರವೇಶ ದ್ವಾರದ ಬಳಿ ಇರುವುದು ಜಯ-ವಿಜಯರ ವಿಗ್ರಹ ಅನ್ನುವುದು ತಿಳಿದು ಬರುತ್ತದೆ. ದ್ವಾರ ಪಾಲಕರಾಗಿ ದೇವಾಲಯದಲ್ಲಿ ಭಿನ್ನಗೊಂಡ  ವಿಗ್ರಹಗಳನ್ನು ಸಮುದ್ರಕ್ಕೋ ನದಿಗೋ ಬಿಡುವ ಪರಿಪಾಠ ಇದೆ. ಈ ರೀತಿ ಮುಳುಗಿಸಿ ಬಿಟ್ಟ ಜಯ-ವಿಜಯರ ವಿಗ್ರಹವೇ ತೇಲಿ ಬಂದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಇದು ಕಡಲಲ್ಲಿ ತೇಲಿ ಬಂದ ಕೃಷ್ಣನ ವಿಗ್ರಹ ಎಂದು ಎಲ್ಲರೂ ಸಂಭ್ರಮಿಸಿ ಕುಣಿಯುವಂತಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಹೊಸ ದೈವಸ್ಥಾನ, ದೇವಸ್ಥಾನಗಳ ಪುನರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಳೆಯ ಮೂರ್ತಿಗಳನ್ನು ಕೆತ್ತನೆಗಳನ್ನು ಶೈಲಿಗಳನ್ನು ಬದಲು ಮಾಡುತ್ತಾರೆ. ಧಾರ್ಮಿಕ ಆಚರಣೆಯ ಪ್ರಕಾರ ಅದನ್ನು ನದಿಗೋ ಸಮುದ್ರಕ್ಕೂ ವಿಸರ್ಜನೆ ಮಾಡಲು ಸೂಚನೆ ಕೊಡಲಾಗುತ್ತದೆ. ಮಲ್ಪೆಯಲ್ಲಿ ಸಿಕ್ಕಿದ ಮೂರ್ತಿ ಕೂಡ ಇಂಥದ್ದೇ ಆಗಿದೆ ಎನ್ನಲಾಗುತ್ತಿದೆ.

Post a Comment

0 Comments