Ticker

6/recent/ticker-posts

Ad Code

ಕಾಯಕಯೋಗಿಯ ಶ್ರಮದುಡಿಮೆಯ ಸ್ಮರಿಸಿ..

 


ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ನಾವು ತಿನ್ನುವ ದವಸ ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವ ರೈತರೇ ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು,  ಅವರನ್ನು  ಭಾರತದ ಬೆನ್ನೆಲುಬು  ಎಂದು ಕರೆದುದು ಅತಿಶಯೋಕ್ತಿಯೇನಲ್ಲ. ಶ್ರಮಜೀವಿಗಳಾದ ರೈತರು ಎಂದಿಗೂ ಸರ್ವ ಮಾನ್ಯರೇ ಆಗಿರುತ್ತಾರೆ. ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್‌ 23. ಪ್ರತಿವರ್ಷ ಈ ದಿನವನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. 

         1902ರ ಡಿಸೆಂಬರ್ 23ರಂದು ಮೀರತ್ ನ ನೂರ್ಪುರ್ ನಲ್ಲಿ  ಜನಿಸಿದ ಚೌಧರಿ ಚರಣ್ ಸಿಂಗ್ ಕೃಷಿ ಆರ್ಥಿಕತೆಯ ಮಹತ್ವವನ್ನು  ಮನಗಂಡು  ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವಿತೀಯ ನಾಯಕ ಎನಿಸಿಕೊಂಡಿದ್ದರು. 1959ರ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು,  ಸಾರ್ವಜನಿಕವಾಗಿಯೇ ನೆಹರೂರವರ ಸಾಮೂಹಿಕ ಮತ್ತು ಸಾಮಾಜಿಕ ನೀತಿಗಳನ್ನು ವಿರೋಧಿಸಿದ್ದರು ಎಂಬುದು ಇತಿಹಾಸ. ಚೌಧರಿ ಚರಣ್ ಸಿಂಗ್ ಅವರು ಜುಲೈ 1979ರಲ್ಲಿ  ಹುದ್ದೆ ವಹಿಸಿ 1980ರ ಜನವರಿಯವರೆಗೆ ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದವರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಅವರ ಜನ್ಮದಿನವನ್ನು ರೈತರ ದಿನವಾಗಿ ಆಚರಿಸಲಾಗುತ್ತದೆ.

    ಸಾಮಾನ್ಯವಾಗಿ ಭಾರತೀಯ ರೈತರದ್ದು ಬಲು ಕಷ್ಟದ ಜೀವನ. ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯದ ಅವರ ಬದುಕು ಅತ್ಯಂತ ತಳಮಟ್ಟದಲ್ಲಿರುತ್ತದೆ. ಅವರನ್ನು ಮೇಲ್ದರ್ಜೆಗೆ ಏರಿಸಲು ಸರಕಾರ ಸತತ ಪ್ರಯತ್ನ ಮಾಡುತ್ತಿದೆ. ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಪೂರೈಸುತ್ತಿದೆ. ರೈತರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಮುಖ್ಯವಾಗಿ ರೈತರು ಸಮಾಜಕ್ಕೆ ನೀಡುವ ಕೊಡುಗೆಯ ಬಗ್ಗೆ ಜನ ಜಾಗೃತಿ ಮೂಡಿಸುವುದೇ ಈ ರೈತರ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ರೈತರು ಅತ್ಯಂತ ಕಷ್ಟದ ಸ್ಥಿತಿಯಲ್ಲಿಯೂ ಹೇಗೆ ಬೆಳೆ ಬೆಳೆಸುತ್ತಾರೆ, ಮಾರುಕಟ್ಟೆ ಹಿಡಿಯುತ್ತಾರೆ ಎಂಬುದರ ಬಗ್ಗೆ, ಅವರ ಬದುಕಿನ ಬವಣೆಗಳ ಬಗ್ಗೆ,  ಶ್ರೀಸಾಮಾನ್ಯನಿಗೆ ಅರಿವು ಮೂಡಿಸುವ ಆಶಯ ಈ ದಿನಾಚರಣೆಯಲ್ಲಿದೆ. 

ಈ ದಿನವು ಹವಾಮಾನ ಬದಲಾವಣೆ, ಆಧುನಿಕ ತಂತ್ರಜ್ಞಾನ, ನ್ಯಾಯಯುತ ಬೆಲೆ ನಿಗದಿ ಇವೇ ಮೊದಲಾದ  ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ರೈತರ  ಸಮರ್ಪಣಾ ಮನೋಭಾವವನ್ನು ಗುರುತಿಸುವ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. 

ವನಜಾಕ್ಷಿ ಪಿ ಚೆಂಬ್ರಕಾನ

Post a Comment

0 Comments