ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದು ಬೆಂಗಳೂರಿನ ಜನರಲ್ಲಿ ಭೀತಿ ಮೂಡಿಸಿತ್ತು. ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬ ವಿಚಿತ್ರವಾಗಿ ವರ್ತಿಸುತ್ತಾ, ಸಮತೋಲನ ಕಳೆದುಕೊಂಡು ನಿಂತಿದ್ದ ದೃಶ್ಯವನ್ನು ಕಂಡು 'ಜೋಂಬಿ ಡ್ರಗ್' ಬೆಂಗಳೂರಿಗೆ ಲಗ್ಗೆ ಇಟ್ಟಿದೆ ಎಂಬ ವದಂತಿ ಹಬ್ಬಿತ್ತು.
'ಜಾಂಬಿ ಡ್ರಗ್' ಎನ್ನುವುದು ಮಾದಕ ವ್ಯಸನಿಗಳ ಲೋಕದಲ್ಲಿ ಕೈಲಾಜಿನ್ ಎಂಬ ಅಪಾಯಕಾರಿ ರಾಸಾಯನಿಕಕ್ಕೆ ಕರೆಯುವ ಹೆಸರಾಗಿದೆ. ಮೂಲತಃ ಇದು ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನೋವು ನಿವಾರಿಸಲು ಬಳಸುವ ಒಂದು ನೋವು ಶಾಮಕ ಔಷಧಿಯಾಗಿದೆ. ಈ ಮಾದಕ ವಸ್ತುವನ್ನು ಸೇವಿಸಿದ ಮನುಷ್ಯರು ತಮ್ಮ ದೇಹದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಅವರು ಪ್ರಜ್ಞೆ ಇದ್ದೂ ಇಲ್ಲದವರಂತೆ ವಿಚಿತ್ರವಾಗಿ ವರ್ತಿಸುತ್ತಾ, ರಸ್ತೆಗಳಲ್ಲಿ ನಿಂತಲ್ಲೇ ಬಾಗಿದ ಸ್ಥಿತಿಯಲ್ಲಿ ಗಂಟೆಗಟ್ಟಲೆ ಇರುತ್ತಾರೆ. ನೋಡಲು ಸಿನಿಮಾಗಳಲ್ಲಿ ಬರುವ ಜಾಂಬಿಗಳಂತೆ ಕಾಣುವುದರಿಂದಲೇ ಇದಕ್ಕೆ 'ಜಾಂಬಿ ಡ್ರಗ್' ಎಂಬ ಹೆಸರು ಬಂದಿದೆ. ಇದರ ಅತ್ಯಂತ ಭೀಕರ ಪರಿಣಾಮವೆಂದರೆ ಇದು ಮನುಷ್ಯನ ಚರ್ಮ ಮತ್ತು ಮಾಂಸವನ್ನು ಜೀವಂತವಾಗಿ ಕೊಳೆಸುತ್ತದೆ. ಈ ಔಷಧವನ್ನು ಚುಚ್ಚುಮದ್ದಿನ ಮೂಲಕ ಪಡೆದಾಗ ದೇಹದ ಭಾಗಗಳಲ್ಲಿ ದೊಡ್ಡ ಗಾಯಗಳಾಗಿ ಮಾಂಸ ಕೊಳೆಯಲಾರಂಭಿಸುತ್ತದೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ 'ನೆಕ್ರೋಸಿಸ್' ಎಂದು ಕರೆಯಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಈ ಗಾಯಗಳು ಗುಣವಾಗದ ಮಟ್ಟಕ್ಕೆ ಹದಗೆಟ್ಟು ವ್ಯಕ್ತಿಯ ಕೈ ಅಥವಾ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ತೆಗೆಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಸಾಮಾನ್ಯವಾಗಿ ಮಾದಕ ವ್ಯಸನಿಗಳು ಈ ಕೈಲಾಜಿನ್ ಅನ್ನು ಘಂಟಾನಿಲ್ ಎಂಬ ಮತ್ತೊಂದು ಪ್ರಬಲ ಡ್ರಗ್ ಜೊತೆ ಬೆರೆಸಿ ಬಳಸುತ್ತಾರೆ. ಈ ಮಿಶ್ರಣವು ಹೃದಯದ ಬಡಿತ ಮತ್ತು ಉಸಿರಾಟವನ್ನು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ಇಳಿಸುತ್ತದೆ. ಡ್ರಗ್ಸ್ ಓವರ್‌ಡೋಸ್ ಆದಾಗ ಜೀವ ಉಳಿಸಲು ಬಳಸುವ ಸಾಮಾನ್ಯ ಮದ್ದುಗಳು ಕೂಡ ಈ ಕೈಲಾಜಿನ್ ವಿರುದ್ಧ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇದು ಅತಿ ವೇಗವಾಗಿ ಸಾವಿಗೆ ದಾರಿ ಮಾಡಿಕೊಡುತ್ತದೆ.
ಬೆಂಗಳೂರಿನಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಗಂಭೀರತೆ ಅರಿತ ಈಶಾನ್ಯ ವಿಭಾಗದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ 'ಪತ್ತೆಯಾದ ವ್ಯಕ್ತಿಯ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ಅಕ್ರಮ ಅಮಲು ಪದಾರ್ಥಗಳ ಅಂಶ ಪತ್ತೆಯಾಗಿಲ್ಲ. 'ಈ ವ್ಯಕ್ತಿ ಬೆಂಗಳೂರಿನವರಲ್ಲ ಹೊರಗಿನಿಂದ ಬಂದವರು ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅದಕ್ಕಾಗಿ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಆ ಔಷಧಗಳ ಜೊತೆಗೆ ಸ್ವಲ್ಪ ಪ್ರಮಾಣದ ಮದ್ಯವನ್ನೂ ಸೇವಿಸಿದ್ದರು. ಮದ್ಯ ಮತ್ತು ಔಷಧಿಯ ಅಡ್ಡಪರಿಣಾಮದಿಂದಾಗಿ ದೇಹದ ಸಮತೋಲನ ತಪ್ಪಿ ಅವರು ವಿಚಿತ್ರವಾಗಿ ವರ್ತಿಸಿದ್ದಾರೆ ಅಷ್ಟೆ ಇದಕ್ಕೂ ಡ್ರಗ್ ಗೂ ಯಾವುದೇ ಸಂಬಂಧವಿಲ್ಲ,' ಎಂದು ಆಯುಕ್ತರು ತಿಳಿಸಿದ್ದಾರೆ. 'ಯಾವುದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯಾವುದೇ ಆಧಾರವಿಲ್ಲದೆ ಡ್ರಗ್ಸ್ ಗೆ ಲಿಂಕ್ ಮಾಡುವುದು ಸರಿಯಲ್ಲ," ಎಂದಿದ್ದಾರೆ. ಅಲ್ಲದೇ ವಿಡಿಯೋ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಮಾತ್ರವಲ್ಲದೆ, ಅದನ್ನು ಹಂಚುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

0 Comments