Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿಗೂ 1 ಗ್ರಾಂ ಚಿನ್ನದ ಉಂಗುರ; ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ

 

ಚೆನ್ನೈ: ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೂ 1 ಗ್ರಾಂ ಚಿನ್ನದ ಉಂಗುರ ಉಚಿತವಾಗಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ತಮಿಳುನಾಡು ಸರ್ಕಾರ ಘೋಷಿಸಿದೆ. ‘ತೈಮಾಮನ್ ತಂಗ ಮೋತಿರಂ ತಿಟ್ಟಂ’ ಹೆಸರಿನ ಈ ಯೋಜನೆ ಮುಖ್ಯಮಂತ್ರಿ ವಿಜಯ್ ಅವರ ಪ್ರಮುಖ ಭರವಸೆಗಳಲ್ಲಿ ಒಂದಾಗಿದ್ದು, ಇದೀಗ ಜಾರಿಗೆ ಬರಲು ಸಿದ್ಧವಾಗಿದೆ.

ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನವಾದ ಜೂನ್ 22ರಿಂದ ಪೂರ್ವಾನ್ವಯವಾಗುವಂತೆ ಯೋಜನೆ ಜಾರಿಯಾಗಲಿದ್ದು, ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ  ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಅಧಿಕೃತ ಚಾಲನೆ ನೀಡಲಾಗುತ್ತದೆ. ಯೋಜನೆಯಡಿ ತಮಿಳುನಾಡಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ ಸುಮಾರು 1 ಗ್ರಾಂ ತೂಕದ ಚಿನ್ನದ ಉಂಗುರ ನೀಡಲಾಗುತ್ತದೆ. ಪ್ರಸ್ತುತ ಚಿನ್ನದ ಮಾರುಕಟ್ಟೆ ಬೆಲೆ ಆಧರಿಸಿ ಉಂಗುರದ ಮೌಲ್ಯ ಸುಮಾರು ₹13,600 ಆಗಿದ್ದು, ಯೋಜನೆಗಾಗಿ ಸರ್ಕಾರ ವಾರ್ಷಿಕವಾಗಿ ₹755.83 ಕೋಟಿ ಮೀಸಲಿಟ್ಟಿದೆ.

ತಮಿಳುನಾಡಿನ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ನವಜಾತ ಶಿಶುವಿಗೆ ತಾಯಿಯ ಸಹೋದರರಿಂದ ಚಿನ್ನದ ಉಡುಗೊರೆ ನೀಡುವ ಪದ್ಧತಿ ಇದೆ. ಇದೇ ಪರಂಪರೆಯನ್ನು ಸಾಂಕೇತಿಕವಾಗಿ ಮುಂದುವರಿಸುವ ಉದ್ದೇಶದಿಂದ ಸರ್ಕಾರವೇ ‘ತೈಮಾಮ’ನ ಪಾತ್ರ ವಹಿಸಿ ಶಿಶುಗಳಿಗೆ ಚಿನ್ನದ ಉಂಗುರ ನೀಡಲು ಮುಂದಾಗಿದೆ. ಈ ಯೋಜನೆಯಿಂದ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆರಿಗೆಗಾಗಿ ದುಬಾರಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದನ್ನು ತಡೆಯಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಳನ್ನು ಉತ್ತೇಜಿಸುವುದು ಹಾಗೂ ತಾಯಿ-ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಗಂಡು-ಹೆಣ್ಣು ಎಂಬ ಯಾವುದೇ ಭೇದವಿಲ್ಲದೆ ಎಲ್ಲಾ ನವಜಾತ ಶಿಶುಗಳು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಕುಟುಂಬದ ಮೊದಲ, ಎರಡನೇ ಅಥವಾ ಮೂರನೇ ಮಗು ಎಂಬ ನಿರ್ಬಂಧವೂ ಇರುವುದಿಲ್ಲ. ಆದರೆ ಫಲಾನುಭವಿಗಳು ತಮಿಳುನಾಡಿನ ನಿವಾಸಿಗಳಾಗಿರಬೇಕು ಮತ್ತು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯ ಮೂಲಕ ಅದನ್ನು ದೃಢೀಕರಿಸಬೇಕಾಗುತ್ತದೆ. ಆದರೆ ಖಾಸಗಿ ಆಸ್ಪತ್ರೆಗಳು ಅಥವಾ ನರ್ಸಿಂಗ್ ಹೋಮ್‌ಗಳಲ್ಲಿ ಹೆರಿಗೆ ನಡೆದರೆ ಈ ಸೌಲಭ್ಯ ದೊರೆಯುವುದಿಲ್ಲ. ಅಲ್ಲದೆ, ಚಿನ್ನದ ಉಂಗುರದ ಬದಲಿಗೆ ನಗದು ನೀಡುವ ವ್ಯವಸ್ಥೆಯೂ ಇರುವುದಿಲ್ಲ.

ಪ್ರತಿ ವರ್ಷ ತಮಿಳುನಾಡಿನಲ್ಲಿ ಸುಮಾರು 7.8 ಲಕ್ಷ ಮಕ್ಕಳ ಜನನವಾಗುತ್ತಿದ್ದು, ಅದರಲ್ಲಿ 4.2 ಲಕ್ಷಕ್ಕೂ ಹೆಚ್ಚು ಜನನಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸರಾಸರಿ ₹63 ಸಾವಿರ ವೆಚ್ಚವಾಗುತ್ತಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಅದು ಸುಮಾರು ₹1,300 ಮಾತ್ರವಾಗಿರುವುದು ಗಮನಾರ್ಹ.

Post a Comment

0 Comments

ಜಾಹೀರಾತು

Responsive Advertisement