Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೂಮ್ ಆ್ಯಪ್‌ನಲ್ಲಿ ಬುಕ್ ಮಾಡಿ ಕಾರು ಕಳ್ಳತನ; ಅಂತಾರಾಜ್ಯ ನಕಲಿ ಬಾಡಿಗೆದಾರ ಸೆರೆ


ಬೆಂಗಳೂರು : ಬಾಡಿಗೆ ಆಧಾರಿತ ಸೇವೆ ಒದಗಿಸುವ ಜೂಮ್ ಆ್ಯಪ್‌ನಲ್ಲಿ ಬುಕ್ ಮಾಡಿ ಕಾರನ್ನು ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಮಲ್ಲೇಶ್ವರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ ಸೈಯದ್ ಕದೀರ್ ಪಾಷಾ ಎಂಬವರ ಸ್ವಿಫ್ಟ್ ಕಾರನ್ನು ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಕೇರಳದ ಕಣ್ಣೂರು ಮೂಲದ ಮಿಶೆಲ್ ಶಫೀಕ್ ಎಂಬಾತನನ್ನು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪಾದರಾಯನಪುರದ ಬಾಡಿಗೆ ಮನೆಯಲ್ಲಿ ವಾಸವಿರುವ ಸೈಯ್ಯದ್, ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ ಮ್ಯಾನೇಜರ್ ಆಗಿದ್ದಾರೆ. 2023ರಲ್ಲಿ ಸ್ವಿಫ್ಟ್ ಕಾರು ಖರೀದಿಸಿದ್ದು, ಮನೆ ಮುಂದೆ ಪಾರ್ಕಿಂಗ್‌ಗೆ ಜಾಗವಿಲ್ಲದ ಕಾರಣ 15ನೇ ಕ್ರಾಸ್‌ನಲ್ಲಿರುವ ಎಂಇಎಸ್ ಕಾಲೇಜು ಮುಂದೆ ಇರುವ ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡಿದ್ದರು. ದೂರುದಾರ ಸೈಯ್ಯದ್ ಅವರು ಕಾರನ್ನು ಸಹೋದರ ಫೈಸಲ್ ಖಾನ್ ಹೆಸರಿನಲ್ಲಿ ಜೂಮ್ ಕಾರ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಲಾಗಿತ್ತು. ಏ.22ರಂದು ಬೆಳಗ್ಗೆ ಆರೋಪಿ ಮಿಶೆಲ್ ಸಫೀಕ್ ಕಾರು ಬುಕ್ ಮಾಡಿದ್ದ. ಇದರಂತೆ ಆತನನ್ನು ಭೇಟಿಯಾಗಿ ಕಂಪನಿ ಷರತ್ತುಗಳನ್ನು  ಹೇಳಿ ಆತನಿಂದ ಡಿಎಲ್ ಹಾಗೂ ಆಧಾರ್ ಕಾರ್ಡ್ ಪಡೆದು ಕಾರ್ ನೀಡಿದ್ದ. ಒಂದು ದಿನಕ್ಕೆಂದು ಕಾರು ಬುಕ್ ಮಾಡಿದ್ದ ಆರೋಪಿಯು ಅಂದಿನಿಂದ ಈವರೆಗೂ ಕಾರು ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಸೈಯ್ಯದ್ ತಿಳಿಸಿದ್ಧಾರೆ.

ಕಾರು ವಾಪಸ್ ನೀಡದ ಸಂಬಂಧ ಕಂಪನಿಗೆ ಹೋಗಿ ವಿಚಾರಣೆ ನಡೆಸಿದಾಗ ಕಾರು ಪತ್ತೆ ಹಚ್ಚುವಂತೆ ಕಾರ್ ರಿಕವರಿ ವಿಭಾಗಕ್ಕೆ ಸೂಚಿಸಲಾಗಿತ್ತು. ಪರಿಶೀಲನೆ ವೇಳೆ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಡಿವೈಸ್ ಕಟ್ ಮಾಡಿರುವುದು ಗೊತ್ತಾಗಿದೆ. ಆಧಾರ್ ಕಾರ್ಡ್‌ನಲ್ಲಿದ್ದ ಕೇರಳ ವಿಳಾಸಕ್ಕೆ ಹೋದಾಗ ಮೂರು ವರ್ಷಗಳಿಂದ ಅರೋಪಿ ತಲೆಮರೆಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳ್ಳತನ ಮಾಡುವ ಉದ್ದೇಶದಿಂದ ಬಾಡಿಗೆ ನೆಪದಲ್ಲಿ ಕಾರು ಪಡೆದು ಮೋಸ ಮಾಡಿರುವುದಾಗಿ ದೂರಿನಲ್ಲಿ ಸೈಯ್ಯದ್ ಆರೋಪಿಸಿದ್ದಾರೆ. ಕಾರು ಪಡೆದು ಕೇರಳಕ್ಕೆ ತೆರಳಿದ್ದ ಆರೋಪಿ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಡಿವೈಸ್ ಹಾಗೂ ಕಾರಿಗೆ ಅಂಟಿಸಿದ್ದ ಫಾಸ್ಟ್ ಟ್ಯಾಗ್ ಕಿತ್ತು ಹಾಕಿದ್ದ. ಕಂಪನಿಯು ಸಂಪರ್ಕಿಸಿದಾಗ ಕೆಲಸ ನಿಮಿತ್ತ ಕೇರಳಕ್ಕೆ ಬಂದಿದ್ದು, ಶೀಘ್ರದಲ್ಲಿ ಕಾರು ವಾಪಸ್ ನೀಡುವೆ ಎಂದು ಸಬೂಬು ನೀಡುತ್ತಿದ್ದ. ಕಾರನ್ನು ಬೇರೆಯವರಿಗೆ ನೀಡಿ ಬೆಂಗಳೂರಿಗೆ ಬಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈತನಿಗಾಗಿ ಶೋಧ ನಡೆಸುತ್ತಿದ್ದ ಪೊಲೀಸರಿಗೆ ತಾಂತ್ರಿಕ ಸುಳಿವು ಅಧರಿಸಿ ಎಲೆಕ್ಟ್ರಾನಿಕ್ ಸಿಟಿ ಬಳಿ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಈತ ಕಣ್ಣೂರು, ತ್ರಿಶೂರ್ ಸೇರಿದಂತೆ ಕೇರಳದಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿಬಂದಿದ್ದ ಎನ್ನಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಕಸ್ಟಡಿಗೆ ಪಡೆದಿರುವ ಪೊಲೀಸರಲ್ಲಿ ಬಾಡಿಗೆ ಪಡೆದ ಕಾರನ್ನು ಸ್ನೇಹಿತರಿಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತನ ಮಾಹಿತಿ ಆಧರಿಸಿ ಕಾರು ರಿಕವರಿಗಾಗಿ ಕೇರಳಕ್ಕೆ ವಿಶೇಷ ತಂಡ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post a Comment

0 Comments


ಜಾಹೀರಾತು

Responsive Advertisement