ಕೋಝಿಕ್ಕೋಡ್ : ತಾಮರಶ್ಯೇರಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ನೀರಿನ ಬಾಟಲಿಯಲ್ಲಿ ಕಳ್ಳಸಾರಾಯಿ (ವ್ಯಾಟ್ ಮದ್ಯ) ಪತ್ತೆಯಾಗಿದೆ. ಶಿಕ್ಷಕರು ನಡೆಸಿದ ಪರಿಶೀಲನೆಯ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಮತ್ತೋರ್ವ ವಿದ್ಯಾರ್ಥಿ ಕಳ್ಳಸಾರಾಯಿಯನ್ನು ತಂದು ನೀಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂದಿನ ತನಿಖೆಯಲ್ಲಿ, ವಿದ್ಯಾರ್ಥಿಯ ಮನೆಯ ಸಮೀಪದ ತೋಟದಿಂದ 56 ಬಾಟಲಿಗಳಲ್ಲಿ ಸಂಗ್ರಹಿಸಿದ್ದ ಸುಮಾರು 28 ಲೀಟರ್ ಕಳ್ಳಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಳ್ಳಸಾರಾಯಿಯನ್ನು ವಿದ್ಯಾರ್ಥಿಯ ಮಲತಂದೆ ತಯಾರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಶಾಲಾ ಆವರಣಕ್ಕೆ ಮದ್ಯವನ್ನು ತಲುಪಿಸಿರುವ ಈ ಘಟನೆ ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದರ ಹಿಂದೆ ಇನ್ನೂ ದೊಡ್ಡ ಜಾಲವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

0 Comments