ತೃಶೂರ್ : 6,597 ಲೀಟರ್ ಅಕ್ರಮ ಸ್ಪಿರಿಟ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಅಬಕಾರಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪಿರಿಟ್ ಪೂರೈಕೆ ಮಾಡುತ್ತಿದ್ದ ಆರೋಪದಡಿ ತೃಶೂರ್ ಮೂಲದ, ಪ್ರಸ್ತುತ ಕರ್ನಾಟಕದ ತಪ್ಪಾಡಿ ಪ್ರದೇಶದಲ್ಲಿ ನೆಲೆಸಿರುವ ಮಣಿಕುಟ್ಟನ್ ಎಂಬಾತನನ್ನು ಬಂಧಿಸಲಾಗಿದೆ. ವಾಡಾನಪ್ಪಳ್ಳಿ ಅಬಕಾರಿ ರೇಂಜ್ ಕಚೇರಿಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಎರ್ನಾಕುಳಂ ಅಬಕಾರಿ ಕ್ರೈಂ ಬ್ರಾಂಚ್, ಪ್ರಕರಣದ ಮೂರನೇ ಆರೋಪಿ ಜಿಶೀನ್‌ಗೆ ಸ್ಪಿರಿಟ್ ವ್ಯವಹಾರಕ್ಕಾಗಿ ಹಣ ಪಾವತಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಮಣಿಕುಟ್ಟನ್‌ನನ್ನು ವಶಕ್ಕೆ ಪಡೆದಿದೆ.
ಮಣಿಕುಟ್ಟನ್ ವಿರುದ್ಧ ಈ ಹಿಂದೆಯೂ ಹಲವು ಅಕ್ರಮ ಸ್ಪಿರಿಟ್ ಸಾಗಾಟ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ತಿರೂರು ಅಬಕಾರಿ ಅಧಿಕಾರಿಗಳು 960 ಲೀಟರ್ ಸ್ಪಿರಿಟ್ ಜಪ್ತಿ ಮಾಡಿದ ಪ್ರಕರಣ, 2023ರಲ್ಲಿ ಚಾವಕ್ಕಾಡ್ ಅಬಕಾರಿ ಅಧಿಕಾರಿಗಳು 1,376 ಲೀಟರ್ ಸ್ಪಿರಿಟ್ ವಶಪಡಿಸಿಕೊಂಡ ಪ್ರಕರಣ ಹಾಗೂ 2025ರಲ್ಲಿ ಕಾಸರಗೋಡು ಪೊಲೀಸರು 1,440 ಲೀಟರ್ ಸ್ಪಿರಿಟ್ ಜಪ್ತಿ ಮಾಡಿದ ಪ್ರಕರಣಗಳಲ್ಲಿ ಸಹ ಆತ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈತನನ್ನು ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪಿರಿಟ್ ಸಾಗಿಸುವ ಪ್ರಮುಖ ಸೂತ್ರಧಾರ ಎಂದು ತನಿಖೆಯಲ್ಲಿ ಗುರುತಿಸಲಾಗಿದೆ. ಇದೇ ಜಾಲಕ್ಕೆ ಸಂಬಂಧಿಸಿದ ಇತರ ಪ್ರಕರಣಗಳಲ್ಲಿಯೂ ಮಣಿಕುಟ್ಟನ್ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಅಬಕಾರಿ ಕ್ರೈಂ ಬ್ರಾಂಚ್ ಸಹಾಯಕ ಆಯುಕ್ತ ಜಿ. ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ, ಸಹಾಯಕ ಅಬಕಾರಿ ನಿರೀಕ್ಷಕ (ಗ್ರೇಡ್) ಜಯಲಾಲ್ ಕೆ., ಪ್ರಿವೆಂಟಿವ್ ಅಧಿಕಾರಿ ಬಾಬು ವಿ., ಸಿವಿಲ್ ಅಬಕಾರಿ ಅಧಿಕಾರಿಗಳಾದ ಶಿಜು ವಿ.ಜಿ., ಜಿತೀಶ್ ಬಿ., ವಿಜೋ ಪಿ ಶಿಜು ಜಾರ್ಜ್ ಒಳಗೊಂಡ ತಂಡವು ಆರೋಪಿಯನ್ನು ಬಂಧಿಸಿದೆ.

0 Comments