ನಾವು ಪ್ರತಿನಿತ್ಯ ಬಟ್ಟೆ, ಮೊಬೈಲ್, ಗಾಡಿಗಳಿಗೆ ಬೇಕಾದ ಪೆಟ್ರೋಲ್, ಔಷಧಿಗಳು ಹಾಗೂ ಬೇರೆ ದೇಶಗಳಿಂದ ಬರುವ ಅನೇಕ ವಸ್ತುಗಳನ್ನು ಬಳಸುತ್ತೇವೆ. ಆದರೆ ಇವೆಲ್ಲವೂ ನಮ್ಮ ಕೈ ಸೇರಲು ಮುಖ್ಯ ಕಾರಣ ನಾವಿಕರು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹಡಗುಗಳಲ್ಲಿ ಕೆಲಸ ಮಾಡುತ್ತಾ ಜಗತ್ತಿನ ವ್ಯಾಪಾರವನ್ನು ಮುನ್ನಡೆಸುತ್ತಿರುವ ಈ ನಾವಿಕರ ಸೇವೆಯನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜೂನ್ 25ರಂದು ನಾವಿಕರ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
2010 ರಲ್ಲಿ, ಅಂತರರಾಷ್ಟ್ರೀಯ ಕಡಲ ಸಂಸ್ಥೆ (IMO), ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಬಹುತೇಕ ಎಲ್ಲವೂ ಸಮುದ್ರ ಸಾರಿಗೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿತವಾಗಿದೆ ಎಂದು ಗುರುತಿಸುವ ಒಂದು ಮಾರ್ಗವಾಗಿ ಜೂನ್ 25 ಅನ್ನು ಅಂತರರಾಷ್ಟ್ರೀಯ ನಾವಿಕರ ದಿನವೆಂದು ಗೊತ್ತುಪಡಿಸಿತು.
2010 ರ ಮನಿಲಾದಲ್ಲಿ ನಡೆದ ರಾಜತಾಂತ್ರಿಕ ಸಮ್ಮೇಳನವು ಪರಿಷ್ಕೃತ STCW (Standards of Training, Certification and Watchkeeping for Seafarers) ಸಮಾವೇಶವನ್ನು ಅಂಗೀಕರಿಸುವ ನಿರ್ಣಯದಲ್ಲಿ ನಾವಿಕರ ದಿನವನ್ನು ಆರಂಭಿಸಲಾಯಿತು. ಅಂತರರಾಷ್ಟ್ರೀಯ ಸಮುದ್ರ ವ್ಯಾಪಾರ, ವಿಶ್ವ ಆರ್ಥಿಕತೆ ಮತ್ತು ನಾಗರಿಕ ಸಮಾಜಕ್ಕೆ ಪ್ರಪಂಚದಾದ್ಯಂತದ ನಾವಿಕರು ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. "ಸರ್ಕಾರಗಳು, ಹಡಗು ಸಂಸ್ಥೆಗಳು, ಕಂಪನಿಗಳು, ಹಡಗು ಮಾಲೀಕರು ಮತ್ತು ಸಂಬಂಧಪಟ್ಟ ಎಲ್ಲಾ ಇತರ ಪಕ್ಷಗಳು ನಾವಿಕರ ದಿನವನ್ನು ಸರಿಯಾಗಿ ಮತ್ತು ಸೂಕ್ತವಾಗಿ ಪ್ರಚಾರ ಮಾಡಲು ಮತ್ತು ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸುತ್ತದೆ" ಎಂದು ನಿರ್ಣಯವು ಹೇಳುತ್ತದೆ. ನಾವಿಕರ ದಿನವನ್ನು ವಿಶ್ವಸಂಸ್ಥೆಯು ಆಚರಣೆಯ ದಿನವೆಂದು ಗುರುತಿಸಿದೆ.
ಸುಮಾರು ಎರಡು ಮಿಲಿಯನ್ ನಾವಿಕರ ಕಾರ್ಯಪಡೆ ಇದೆ. ಅವರಲ್ಲಿ ಹೆಚ್ಚಿನವರು ಭಾರತ ಮತ್ತು ಚೀನಾ ದೇಶಗಳಿಗೆ ಸೇರಿದವರಾಗಿದ್ದಾರೆ. ಭಾರತದಲ್ಲಿಯೇ ಸುಮಾರು 2.5 ಲಕ್ಷಕ್ಕೂ ಹೆಚ್ಚು ನಾವಿಕರು ವಿವಿಧ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಗತ್ತಿನ ಆರ್ಥಿಕತೆಯಲ್ಲಿ ಅವರ ಪಾತ್ರ ಬಹಳ ದೊಡ್ಡದಾಗಿದೆ. ಅವರು ಸರಕು ಹಡಗುಗಳು, ಕಂಟೇನರ್ ಹಡಗುಗಳು ಮತ್ತು ಟ್ಯಾಂಕರ್‌ಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ಕಡಲ ಚಟುವಟಿಕೆಗಳನ್ನು ಬೆಂಬಲಿಸುತ್ತಾರೆ. ಸಮುದ್ರಯಾನವು ವೈಯಕ್ತಿಕ ಜೀವನೋಪಾಯಕ್ಕೆ ಮಾತ್ರವಲ್ಲದೆ ಸ್ಥಳೀಯ ಆರ್ಥಿಕತೆಗಳಿಗೂ, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಕಡಲ ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಕೊಡುಗೆ ನೀಡುವ ವಿಶಾಲ ಉದ್ಯೋಗಾವಕಾಶಗಳನ್ನು ನೀಡುತ್ತದೆ.
ಪ್ರಪಂಚದಲ್ಲಿ ನಡೆಯುವ ಒಟ್ಟು ವ್ಯಾಪಾರದ ಶೇಕಡಾ 90ಕ್ಕಿಂತ ಹೆಚ್ಚು ಭಾಗ ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಅಗತ್ಯ ವಸ್ತುಗಳನ್ನು ಸಾಗಿಸುವ ಕೆಲಸವನ್ನು ನಾವಿಕರು ಮಾಡುತ್ತಾರೆ. ಅವರು ತಮ್ಮ ಕೆಲಸವನ್ನು ನಿಲ್ಲಿಸಿದರೆ ಜಗತ್ತಿನ ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀಳುತ್ತದೆ. ನಮ್ಮ ದೈನಂದಿನ ಜೀವನಕ್ಕೂ ತೊಂದರೆಯಾಗುತ್ತದೆ.
ನಾವಿಕರ ಜೀವನ ಅಷ್ಟು ಸುಲಭವಲ್ಲ. ಕೆಲಸದ ಕಾರಣದಿಂದ ಅವರು ತಮ್ಮ ಕುಟುಂಬದಿಂದ ದೂರ ಇರಬೇಕಾಗುತ್ತದೆ. ಕೆಲವೊಮ್ಮೆ 8 ರಿಂದ 10 ತಿಂಗಳುಗಳ ಕಾಲ ಮನೆಯವರನ್ನು ನೋಡದೇ ಸಮುದ್ರದಲ್ಲೇ ಕಳೆಯಬೇಕಾಗುತ್ತದೆ. ಕುಟುಂಬದವರ ಜೊತೆ ಹಬ್ಬಗಳನ್ನು ಆಚರಿಸಲು, ವಿಶೇಷ ಸಂದರ್ಭಗಳಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆದರೂ ತಮ್ಮ ಕುಟುಂಬದ ಹಾಗೂ ತಮ್ಮ ಕರ್ತವ್ಯದ ಜವಾಬ್ದಾರಿಗಾಗಿ ಅವರು ಕೆಲಸ ಮಾಡುತ್ತಿರುತ್ತಾರೆ.
ಸಮುದ್ರಯಾನದಲ್ಲಿ ಕೆಲಸ ಮಾಡುವುದು ತುಂಬಾ ಸವಾಲಿನ ಕೆಲಸ. ಬಿರುಗಾಳಿ, ದೈತ್ಯ ಅಲೆಗಳು, ಕೆಟ್ಟ ಹವಾಮಾನ ಹಾಗೂ ಪ್ರಕೃತಿ ವಿಕೋಪಗಳ ನಡುವೆ ಅವರು ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಡಲ್ಗಳ್ಳರ ದಾಳಿ, ಯುದ್ಧದ ಭಯ ಹಾಗೂ ಇತರ ಅಪಾಯಗಳನ್ನೂ ಎದುರಿಸಬೇಕಾಗುತ್ತದೆ. ಆದರೂ ತಮ್ಮ ಜೀವದ ಹಂಗು ತೊರೆದು ಜಗತ್ತಿನ ಅಗತ್ಯ ವಸ್ತುಗಳನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸವನ್ನು ಮಾಡುತ್ತಾರೆ.
ನಾವಿಕರ ಕೆಲಸ ಎಂದರೆ ಕೇವಲ ಹಡಗು ಓಡಿಸುವುದು ಮಾತ್ರವಲ್ಲ. ಒಂದು ಹಡಗಿನಲ್ಲಿ ಕ್ಯಾಪ್ಟನ್, ಎಂಜಿನಿಯರ್‌ಗಳು, ಎಲೆಕ್ಟ್ರಿಷಿಯನ್‌ಗಳು ಹಾಗೂ ಇತರ ಸಿಬ್ಬಂದಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಅವರು ಒಂದೇ ಕುಟುಂಬದ ಸದಸ್ಯರಂತೆ ಪರಸ್ಪರ ಸಹಕಾರದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.
ಹಿಂದೆ ಸಮುದ್ರಯಾನ ಕ್ಷೇತ್ರದಲ್ಲಿ ಪುರುಷರೇ ಹೆಚ್ಚು ಕೆಲಸ ಮಾಡುತ್ತಿದ್ದರು. ಆದರೆ ಈಗ ಮಹಿಳೆಯರೂ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅವರಿಗೆ ಸಮಾನ ಅವಕಾಶ ಮತ್ತು ಸುರಕ್ಷತೆ ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ನಾವಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರತಿದಿನ 10 ಗಂಟೆಗಳ ಕಡ್ಡಾಯ ವಿಶ್ರಾಂತಿಯಂತಹ ನಿಯಮಗಳನ್ನೂ ರೂಪಿಸಲಾಗಿದೆ.
ನಾವಿಕರ ಅಂತರಾಷ್ಟ್ರೀಯ ದಿನವು ಅವರ ಸೇವೆ, ಶ್ರಮ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳುವ ದಿನವಾಗಿದೆ. ನಾವು ಬಳಸುವ ಅನೇಕ ವಸ್ತುಗಳು ನಮ್ಮ ಕೈ ಸೇರಲು ಅವರ ಪರಿಶ್ರಮ ಕಾರಣವಾಗಿದೆ. ಆದ್ದರಿಂದ ನಾವಿಕರ ಕೊಡುಗೆಯನ್ನು ಗೌರವಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಶ್ರಾವ್ಯಾ ಭಟ್ ಸ್ವರ್ಗ
ಪತ್ರಿಕೋದ್ಯಮ ವಿದ್ಯಾರ್ಥಿನಿ; ಎಸ್.ಡಿ .ಎಂ ಕಾಲೇಜು ಉಜಿರೆ

0 Comments