ಕಾಸರಗೋಡು : ಐದು ವರ್ಷದೊಳಗಿನ ಮಕ್ಕಳನ್ನು ಪೊಲಿಯೊ ರೋಗದಿಂದ ರಕ್ಷಿಸುವ ಉದ್ದೇಶದಿಂದ ಜೂನ್ 28ರಂದು ದೇಶದಾದ್ಯಂತ ಪಲ್ಸ್ ಪೊಲಿಯೊ ಲಸಿಕಾ ಅಭಿಯಾನ ನಡೆಯಲಿದೆ. ಅಭಿಯಾನದ ಅಂಗವಾಗಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪೊಲಿಯೊ ಹನಿಯನ್ನು ನೀಡಲಾಗುತ್ತದೆ. ರಾಜ್ಯದಲ್ಲಿ ಐದು ವರ್ಷದೊಳಗಿನ 19,80,224 ಮಕ್ಕಳಿಗೆ ಪೊಲಿಯೊ ಹನಿ ನೀಡುವ ಗುರಿ ಹೊಂದಲಾಗಿದೆ.
ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಜನಕೀಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ಖಾಸಗಿ ಆಸ್ಪತ್ರೆಗಳು, ವಾಚನಾಲಯಗಳು, ಶಾಲೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಕಟ್ಟಡಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಜನರಿಗೆ ಸುಲಭವಾಗಿ ತಲುಪುವ ಸ್ಥಳಗಳಲ್ಲಿ ಬೂತ್‌ಗಳನ್ನು ಸ್ಥಾಪಿಸಿ ಮಕ್ಕಳಿಗೆ ಪೊಲಿಯೊ ಹನಿ ನೀಡಲಾಗುತ್ತದೆ.
ಸಾಮಾನ್ಯ ಬೂತ್‌ಗಳ ಜೊತೆಗೆ ಪ್ರಯಾಣದಲ್ಲಿರುವ ಮಕ್ಕಳಿಗೂ ಲಸಿಕೆ ನೀಡುವ ಉದ್ದೇಶದಿಂದ 539 ಟ್ರಾನ್ಸಿಟ್ ಬೂತ್‌ಗಳು, 283 ಮೊಬೈಲ್ ಬೂತ್‌ಗಳು ಹಾಗೂ ವಿಶೇಷ ಬೂತ್‌ಗಳನ್ನು ತೆರೆಯಲಾಗುತ್ತದೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ಬೋಟ್ ಜೆಟ್ಟಿಗಳಲ್ಲಿ ಟ್ರಾನ್ಸಿಟ್ ಬೂತ್‌ಗಳು ಕಾರ್ಯನಿರ್ವಹಿಸಲಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ.
ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆತಂದು ಕಡ್ಡಾಯವಾಗಿ ಪೊಲಿಯೊ ಹನಿ ಹಾಕಿಸುವಂತೆ, ಆ ಮೂಲಕ ಪೊಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಈಗಾಗಲೇ ಹಲವು ಬಾರಿ ಪೊಲಿಯೊ ಲಸಿಕೆ ಪಡೆದ ಮಕ್ಕಳಿಗೂ ಈ ಅಭಿಯಾನದ ವೇಳೆ ಮತ್ತೊಮ್ಮೆ ಕಡ್ಡಾಯವಾಗಿ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

0 Comments