ಪಶ್ಚಿಮ ಬಂಗಾಳದ ಕೋಲ್ಕತ್ತಾದ ತಾರತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಏಕಾಏಕಿ ಕುಸಿದ ಪರಿಣಾಮ ಭಾರೀ ಅವಘಡ ಸಂಭವಿಸಿದೆ. ಘಟನೆದಲ್ಲಿ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಧ್ಯಾಹ್ನ ಸಂಭವಿಸಿದ ಈ ದುರಂತವು ಪಶ್ಚಿಮ ಕೋಲ್ಕತ್ತಾದ ಬ್ರೇಸ್ ಬ್ರಿಡ್ಜ್ ಸಮೀಪದ ಟ್ರಾನ್ಸ್‌ಪೋರ್ಟ್ ಡಿಪೋ ರಸ್ತೆಯಲ್ಲಿರುವ ನಿರ್ಮಾಣ ಸ್ಥಳದಲ್ಲಿ ನಡೆದಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹಲವರು ಅದರಡಿ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸುಮಾರು 23 ಮಂದಿ ಸಿಲುಕಿರುವ ಸಾಧ್ಯತೆ ಇದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಪಡೆ ಹಾಗೂ ನಾಗರಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದುವರೆಗೆ ಹಲವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಇನ್ನೂ ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕುಸಿದ ಕಟ್ಟಡದ ಭಾರೀ ಕಬ್ಬಿಣದ ಕಂಬಗಳು ಮತ್ತು ಇತರೆ ನಿರ್ಮಾಣ ಸಾಮಗ್ರಿಗಳನ್ನು ಕ್ರೇನ್‌ಗಳ ನೆರವಿನಿಂದ ತೆರವುಗೊಳಿಸಲಾಗುತ್ತಿದೆ. ಸಿಲುಕಿರುವ ಕಾರ್ಮಿಕರನ್ನು ತಲುಪಲು ರಕ್ಷಣಾ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇಲ್ಛಾವಣಿ ಕುಸಿತಕ್ಕೆ ನಿಖರ ಕಾರಣವೂ ತಿಳಿದುಬಂದಿಲ್ಲ.

0 Comments