Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸರ್ಕಸ್ ತಂಡದ ಜತೆ ಮನೆ ಬಿಟ್ಟು ನಾಪತ್ತೆಯಾಗಿದ್ದ ಸತೀಶ ಸಲೀಂ ಆಗಿ ಮರಳಿ ಮನೆಗೆ

ಮಂಗಳೂರು  : ದಕ್ಷಿಣ ಕನ್ನಡ  ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ.  26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ  ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.

ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ.

ಜೂನ್ 9 ರಂದು ಸಲೀಂ ತನ್ನ  ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ.

ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು. ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾನೆ. ಮಗ ಸಿಗಲಿ ಎಂದು ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ತಾಯಿ ವರ್ಷಗಳಿಂದ ಹೊತ್ತಿದ್ದ ಹರಕೆ ಕೊನೆಗೂ ಫಲಿಸಿದೆ.  ‘ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು, ಅವನನ್ನು ಹೇಗಾದರೂ ಕರೆತನ್ನಿ’ ಎಂದು ಇತ್ತೀಚೆಗಷ್ಟೇ ತಾಯಿ ತನ್ನ ಉಳಿದ ಮಕ್ಕಳ ಬಳಿ ಕಣ್ಣೀರಿಟ್ಟಿದ್ದು, ಹೆತ್ತ ಕರುಳಿನ ಹಂಬಲಕ್ಕೆ ಓಗೊಟ್ಟಂತೆ ಮಗ ಮರಳಿ ಬಂದಿದ್ದಾರೆ. ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಸಂತಸದಿಂದ ಕಾಲ ಕಳೆದ ಸತೀಶ್, ಇದೀಗ  ಮಹಾರಾಷ್ಟ್ರಕ್ಕೆ ಮರಳಿದ್ದಾರೆ.

Post a Comment

0 Comments


ಜಾಹೀರಾತು

Responsive Advertisement