NCERT : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಬಿಡುಗಡೆ ಮಾಡಿರುವ 9ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಅಳವಡಿಸಲಾಗಿದೆ.
‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಆಂಡ್ ಬಿಯಾಂಡ್’ ಹೆಸರಿನ ಈ ಪುಸ್ತಕದಲ್ಲಿ ಭಾರತೀಯ ಪ್ರಜಾಪ್ರಭುತ್ವದ ವಿವಿಧ ಅಂಶಗಳ ಜೊತೆಗೆ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಕುರಿತ ಅಧ್ಯಾಯವನ್ನೂ ಸೇರಿಸಲಾಗಿದೆ. ‘ಚುನಾವಣೆಗಳು’ ಎಂಬ ಅಧ್ಯಾಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮಹತ್ವವನ್ನು ವಿವರಿಸಲಾಗಿದ್ದು, ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹ ವ್ಯಕ್ತಿಗಳು ಪಟ್ಟಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಕೈಗೊಳ್ಳುವ ವಿಶೇಷ ಕ್ರಮ ಎಂದು ವಿವರಿಸಲಾಗಿದೆ.
18 ವರ್ಷ ಪೂರೈಸಿದರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಯುವ ಮತದಾರರನ್ನು ಗುರುತಿಸಿ ಸೇರಿಸುವುದು, ಮರಣ ಹೊಂದಿದವರು, ಸ್ಥಳಾಂತರಗೊಂಡವರು, ನಕಲಿ ಹಾಗೂ ಪತ್ತೆಯಾಗದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕವೇ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಭಾರತೀಯ ಚುನಾವಣಾ ಆಯೋಗ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಬಳಕೆ ಮಾಡುತ್ತಿರುವುದನ್ನು ವಿವರಿಸಲಾಗಿದೆ. 2024ರ ಲೋಕಸಭಾ ಚುನಾವಣೆಯ ವೇಳೆಗೆ ದೇಶದಲ್ಲಿ 96.8 ಕೋಟಿಗೂ ಅಧಿಕ ನೋಂದಾಯಿತ ಮತದಾರರಿದ್ದರು ಎಂಬ ಮಾಹಿತಿಯನ್ನೂ ನೀಡಲಾಗಿದೆ.
ಮಹಿಳೆಯರಿಗೆ ಆರಂಭದಿಂದಲೇ ಸಮಾನ ಮತದಾನದ ಹಕ್ಕು ದೊರೆತಿರುವುದು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ಹಾಗೂ ಮಹಿಳಾ ಸ್ನೇಹಿ ಪಂಚಾಯತ್‌ಗಳ ಉದಾಹರಣೆಗಳನ್ನೂ ಪಠ್ಯದಲ್ಲಿ ಸೇರಿಸಲಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂ), ವಿವಿಪ್ಯಾಟ್ ವ್ಯವಸ್ಥೆ, ಮಾದರಿ ನೀತಿ ಸಂಹಿತೆ ಮತ್ತು ಮತದಾರರ ಜಾಗೃತಿ ಅಭಿಯಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ವಿಷಯವನ್ನು ಮೊದಲ ಬಾರಿಗೆ 9ನೇ ತರಗತಿ ಮಟ್ಟದಲ್ಲೇ ಪರಿಚಯಿಸಲಾಗಿದೆ. ‘ಭಾರತದಲ್ಲಿ ಪ್ರಜಾಸತ್ತಾತ್ಮಕ ಆಚರಣೆಗಳಿಗೆ ಇರುವ ಸವಾಲುಗಳು’ ಎಂಬ ಭಾಗದಡಿ ತುರ್ತು ಪರಿಸ್ಥಿತಿಯ ಹಿನ್ನೆಲೆ, ಪರಿಣಾಮಗಳು ಹಾಗೂ ಪ್ರಜಾಪ್ರಭುತ್ವದ ಮೇಲೆ ಬೀರಿದ ಪ್ರಭಾವವನ್ನು ವಿವರಿಸಲಾಗಿದೆ.
1975ರಲ್ಲಿ ಆಂತರಿಕ ಅಶಾಂತಿಯ ನೆಪದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಅದರ 21 ತಿಂಗಳ ಅವಧಿಯಲ್ಲಿ ಹಲವು ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿತ್ತು, ಪತ್ರಿಕಾ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿತ್ತು ಹಾಗೂ ಅನೇಕ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಲೋಕನಾಯಕ ಜಯಪ್ರಕಾಶ್ ನಾರಾಯಣರ (ಜೆಪಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಮತ್ತು ನಾಗರಿಕರ ಚಳವಳಿಗಳು ಹಾಗೂ 1977ರ ಚುನಾವಣೆಯ ಫಲಿತಾಂಶಗಳು ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಸಾಬೀತುಪಡಿಸಿದವು ಎಂದು ವಿವರಿಸಲಾಗಿದೆ. ಪ್ರಜಾಪ್ರಭುತ್ವಕ್ಕೆ ತುರ್ತು ಪರಿಸ್ಥಿತಿ ಮಾತ್ರವಲ್ಲದೆ ಸುಳ್ಳು ಸುದ್ದಿ, ತಪ್ಪು ಮಾಹಿತಿ, ಸಾರ್ವಜನಿಕ ಆಸ್ತಿ ಹಾನಿ, ಬಡತನ, ಪ್ರಾದೇಶಿಕತೆ ಹಾಗೂ ಲಿಂಗ ಅಸಮಾನತೆಗಳೂ ಸವಾಲುಗಳಾಗಿವೆ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಎನ್‌ಸಿಇಆರ್‌ಟಿ ತೆಗೆದುಕೊಂಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಮುಂದಿನ ಪೀಳಿಗೆ ತುರ್ತು ಪರಿಸ್ಥಿತಿಯಂತಹ ಐತಿಹಾಸಿಕ ಘಟನೆಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದು ಹೇಳಿದ್ದಾರೆ.

0 Comments