SPOT MARRIAGE : ಡೆಸ್ಟಿನೇಷನ್ ವೆಡ್ಡಿಂಗ್, ಪ್ರೀ-ವೆಡ್ಡಿಂಗ್ ಶೂಟ್, ಪೋಸ್ಟ್-ವೆಡ್ಡಿಂಗ್ ಶೂಟ್ ಹೀಗೆ ದಿನಕ್ಕೊಂದು ಹೊಸ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ನಡುವೆ ಕೇರಳದಲ್ಲಿ ಇದೀಗ ಹೊಸ ಟ್ರೆಂಡೊಂದು ವೈರಲ್ ಆಗುತ್ತಿದೆ ಅದುವೇ 'ಸ್ಪಾಟ್ ಮ್ಯಾರೇಜ್'.
ಎಲ್ಲರ ಗಮನ ಸೆಳೆಯುವಂತಹ 'ಸ್ಪಾಟ್ ಮ್ಯಾರೇಜ್' ಏನಿದು! ಎಂದು ಅಚ್ಚರಿಪಡಬೇಡಿ. ಇಲ್ಲಿ ಮದುವೆಯಾಗಲು ಹೊಸಬರು ಬರುತ್ತಿಲ್ಲ, ಬದಲಿಗೆ ಈಗಾಗಲೇ ಮದುವೆಯಾಗಿ ವರ್ಷಗಳು ಕಳೆದ ದಂಪತಿಗಳೇ ದೇವಸ್ಥಾನಕ್ಕೆ ಬಂದು ಪುನಃ ಹಾರ ಬದಲಾಯಿಸಿಕೊಂಡು ಮರುಮದುವೆಯಾಗುತ್ತಿದ್ದಾರೆ. ಇಂತಹದೊಂದು ಅಪರೂಪದ ಆಚರಣೆಗೆ ಸಾಕ್ಷಿಯಾಗಿರುವುದು ಕೇರಳದ ಪ್ರಸಿದ್ಧ ಗುರುವಾಯೂರು ದೇವಾಲಯ. ಈ ಪುಣ್ಯಕ್ಷೇತ್ರದಲ್ಲಿ ಈಗಾಗಲೇ ಮದುವೆಯಾಗಿರುವ ದಂಪತಿಗಳು ಮತ್ತೆ ವಿವಾಹದ ಶಾಸ್ತ್ರಗಳನ್ನು ಮಾಡುವ ಈ ಹೊಸ ಪದ್ಧತಿ ಜನಪ್ರಿಯವಾಗುತ್ತಿದೆ. ಗುರುವಾಯೂರಪ್ಪನ ಆಶೀರ್ವಾದ ಪಡೆದು, ದೇವರ ಸಮ್ಮುಖದಲ್ಲಿ ಮತ್ತೊಮ್ಮೆ ಪರಸ್ಪರ ಹಾರ ಬದಲಾಯಿಸಿಕೊಳ್ಳಲು ನೂರಾರು ದಂಪತಿಗಳು ಪ್ರತಿದಿನ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. 'ಸ್ಪಾಟ್ ಮ್ಯಾರೇಜ್'ಗೆ ಯಾವುದೇ ಮುಂಗಡ ಬುಕ್ಕಿಂಗ್ ಮಾಡುವ ಅಗತ್ಯವಿರುವುದಿಲ್ಲ. ವಿವಾಹ ಸಮಾರಂಭಕ್ಕೂ ಎರಡು ಅಥವಾ ಮೂರು ಗಂಟೆಗಳ ಮೊದಲು ಕೇವಲ 750 ರೂ. ಪಾವತಿಸಿ ಟಿಕೆಟ್ ಪಡೆದುಕೊಂಡರೆ ಸಾಕು. ಇಲ್ಲಿ ವಧು-ವರರು ಕೊರಳಿಗೆ ಧರಿಸುವ ತುಳಸಿ ಹಾರವನ್ನು ಸಿದ್ಧಪಡಿಸಲು ಮಾತ್ರ ಸ್ವಲ್ಪ ಸಮಯ ಬೇಕಾಗುತ್ತದೆ. ಮದುವೆಯ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್ ಬೇಕೆನ್ನುವವರು 500 ರೂ.ಗಳ ಹೆಚ್ಚುವರಿ ಟಿಕೆಟ್ ಖರೀದಿಸಬೇಕಾಗುತ್ತದೆ. ಟಿಕೆಟ್ ಪಡೆದು ವಿವಾಹ ಮಂಟಪಕ್ಕೆ ಆಗಮಿಸಿದರೆ, ಕೇವಲ ಐದು ನಿಮಿಷಗಳಲ್ಲಿ ಮದುವೆ ಶಾಸ್ತ್ರಗಳು ಮುಗಿಯುತ್ತದೆ.
ಈ ದೇವಾಲಯದಲ್ಲೇ ಮಾಡಿಕೊಳ್ಳಬೇಕೆಂಬ ಆಸೆ ಇದ್ದು ಕಾರಣಾಂತರಗಳಿಂದ ಅದು ಈಡೇರದೆ ಇದ್ದವರು ಇಲ್ಲಿಗೆ ಬಂದು ತಮ್ಮ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ, ತಮ್ಮ ವಿವಾಹ ವಾರ್ಷಿಕೋತ್ಸವವನ್ನು (ಬೆಳ್ಳಿಹಬ್ಬ, ಸುವರ್ಣ ಮಹೋತ್ಸವದಂತಹ ಆಚರಣೆ) ಆಚರಿಸಿಕೊಳ್ಳುತ್ತಿರುವವರು ಕೂಡ ಸ್ಪಾಟ್ ಮ್ಯಾರೆಜ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ, ರೋಗಗಳಿಂದ ಗುಣಮುಖರಾಗಿ ಮರಳಿ ಹೊಸ ಜೀವನ ಪಡೆದುಕೊಂಡವರು ಭಗವಂತನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೇವರ ಸನ್ನಿಧಿಯಲ್ಲಿ ಮತ್ತೆ ಹಾರ ಬದಲಾಯಿಸಿಕೊಂಡು ಭಕ್ತಿಯಿಂದ ಪ್ರಾರ್ಥಿಸಬಹುದಾಗಿದೆ. ಇದೀಗ ಇದು ಯುವಜನತೆ ಸೇರಿದಂತೆ ಎಲ್ಲರ ನೆಚ್ಚಿನ ಟ್ರೆಂಡ್ ಆಗಿ ಬದಲಾಗಿದೆ. ಈ ವಿಶೇಷ ಮದುವೆಗಾಗಿ ದೇವಾಲಯದ ಆಡಳಿತ ಮಂಡಳಿಯಾದ ದೇವಸ್ವಂ ಬೋರ್ಡ್ ಕೂಡ ಭಕ್ತರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡುತ್ತದೆ. ವಿವಾಹ ಮಂಟಪದಲ್ಲಿ ಬೆಳಗಲು ತುಪ್ಪದ ದೀಪ, ವಿವಾಹದ ಆಚಾರ್ಯರಾಗಿ 'ಕೋಯಮ್ಮ', ವಧು-ವರರು ಕೊರಳಿಗೆ ಧರಿಸಲು ಪವಿತ್ರ ತುಳಸಿ ಹಾರ, ಹಣೆಗೆ ಇಡಲು ಕುಂಕುಮ, ಹಾಗೂ ವಿವಾಹದ ಹಿನ್ನೆಲೆಯಲ್ಲಿ ಮಂಗಳ ವಾದ್ಯವಾದ ನಾದಸ್ವರವನ್ನು ದೇವಸ್ವಂ ಮಂಡಳಿಯೇ ವ್ಯವಸ್ಥೆ ಮಾಡುತ್ತದೆ.
.jpeg)
0 Comments