ಕರಾಕಾಸ್: ಎರಡು ದಿನಗಳ ಹಿಂದಷ್ಟೇ ಸಂಭವಿಸಿದ ಭೀಕರ ಅವಳಿ ಭೂಕಂಪಗಳ ಆಘಾತದಿಂದ ವೆನೆಜುವೆಲಾ ಚೇತರಿಸಿಕೊಳ್ಳುವ ಮುನ್ನವೇ, ಮತ್ತೊಂದು ಭೂಕಂಪ ಸಂಭವಿಸಿ ಜನತೆಯನ್ನು ಬೆಚ್ಚಿಬೀಳಿಸಿದೆ. ಯುರೋಪಿಯನ್-ಮೆಡಿಟರೇನಿಯನ್ ಸಿಸ್ಮೋಲಾಜಿಕಲ್ ಸೆಂಟರ್ (EMSC) ವರದಿಯ ಪ್ರಕಾರ, ಇಂದು ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯ ಭೂಕಂಪ ದಾಖಲಾಗಿದೆ. ಮರಕೇ ನಗರದ ವಾಯುವ್ಯಕ್ಕೆ 61 ಕಿಲೋಮೀಟರ್ ದೂರದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದ್ದು, ಮರಕೇ ಮತ್ತು ರಾಜಧಾನಿ ಕರಾಕಾಸ್‌ನಾದ್ಯಂತ ಭೂಮಿ ನಡುಗಿದ ಅನುಭವವಾಗಿದೆ.
ಜೂನ್ 24ರಂದು ವೆನೆಜುವೆಲಾದ ಕೆರಿಬಿಯನ್ ಕರಾವಳಿ ತೀರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಅವಳಿ ಭೂಕಂಪಗಳು ದೇಶದಲ್ಲಿ ಭಾರಿ ದುರಂತಕ್ಕೆ ಕಾರಣವಾಗಿವೆ. ಈವರೆಗೆ ಅಧಿಕೃತವಾಗಿ 920ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 4,000ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳ ಅಡಿ ಇನ್ನೂ ನೂರಾರು ಜನರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಭೂಕಂಪದ ತೀವ್ರತೆಗೆ ಬಹು ಮಹಡಿ ಕಟ್ಟಡಗಳು ಧರೆಗುರುಳಿವೆ. ದೇಶದ ಪ್ರಮುಖ ವಿಮಾನ ನಿಲ್ದಾಣಕ್ಕೂ ಭಾರಿ ಹಾನಿಯಾಗಿರುವುದರಿಂದ, ರಕ್ಷಣಾ ತಂಡಗಳು ಮತ್ತು ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸ್ಥಳಕ್ಕೆ ತಲುಪಿಸಲು ಭಾರಿ ಅಡಚಣೆ ಉಂಟಾಗಿದೆ. ಸದ್ಯ ಅವಶೇಷಗಳ ತೆರವು ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ.
ವೆನೆಜುವೆಲಾ ಇತಿಹಾಸದಲ್ಲಿ ಕಳೆದ 126 ವರ್ಷಗಳಲ್ಲೇ ಸಂಭವಿಸಿದ ಅತಿ ದೊಡ್ಡ ಭೂಕಂಪ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1900ರ ನಂತರ ಇಷ್ಟು ಭೀಕರ ಭೂಕಂಪ ದಾಖಲಾಗಿರಲಿಲ್ಲ. ಕಳೆದ 1997ರಲ್ಲಿ ಸಂಭವಿಸಿದ್ದ 6.9 ತೀವ್ರತೆಯ ಭೂಕಂಪದಲ್ಲಿ 73 ಮಂದಿ ಬಲಿಯಾಗಿದ್ದರು, ಆದರೆ ಈಗಿನ ದುರಂತ ಆ ಎಲ್ಲ ದಾಖಲೆಗಳನ್ನು ಮೀರಿಸಿದೆ.

0 Comments