ಬ್ರಹ್ಮಾವರ : ಸ್ಥಳೀಯ ಬಸ್ ನಿಲ್ದಾಣದಿಂದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಬಾಲಾಪರಾಧಿಯನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಾರಂಬಳ್ಳಿ ಗ್ರಾಮದ ಸಾಲಿಕೇರಿ ನಿವಾಸಿ ವಿಖ್ಯಾತ್ ಆಚಾರ್ಯ (19) ಹಾಗೂ ಮಟಪಾಡಿ ಗ್ರಾಮದ ಸುಚಿತ್ ನಾಯಕ್ (20) ಎಂದು ಗುರುತಿಸಲಾಗಿದೆ. ಜೂನ್ 1ರಂದು ಬೆಳಿಗ್ಗೆ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿದ್ದ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನನ್ನು ಆರೋಪಿಗಳು ಅಪಹರಿಸಿ ಕೇರಳದ ತಲಪಾಡಿ ಸಮೀಪದ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪೆನಿಯೊಂದಕ್ಕೆ ಕರೆದೊಯ್ದು ಕೆಲಸಕ್ಕೆ ಸೇರಿಸಿದ್ದರು ಎನ್ನಲಾಗಿದೆ. ಕೆಲಸ ಮಾಡಲು ಇಚ್ಛೆ ಇಲ್ಲ, ಮನೆಗೆ ತೆರಳುವುದಾಗಿ ಬಾಲಕ ಹೇಳಿದ ಹಿನ್ನೆಲೆಯಲ್ಲಿ ಆರೋಪಿಗಳು ಆತನನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಸುಚಿತ್ ನಾಯಕ್ ವಿದ್ಯುತ್ ತಂತಿಯಿಂದ ಹಲ್ಲೆ ನಡೆಸಿದ್ದರೆ, ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಬಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಲಾಗಿದ್ದು, ಈ ಕೃತ್ಯದ ವಿಡಿಯೊವನ್ನು ಮತ್ತೋರ್ವ ಬಾಲಾಪರಾಧಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ.
ಮಗ ನಾಪತ್ತೆಯಾಗಿ ದೌರ್ಜನ್ಯಕ್ಕೊಳಗಾಗಿರುವ ಬಗ್ಗೆ ಬಾಲಕನ ಪೋಷಕರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆ (BNS-2023)ಯ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆಗೆ ಸಂಬಂಧಿಸಿದ ವಿವಿಧ ಕಲಂಗಳು, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಜುವೆನೈಲ್ ಜಸ್ಟಿಸ್ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂರನೇ ಆರೋಪಿಯು ಅಪ್ರಾಪ್ತನಾಗಿದ್ದರಿಂದ ಆತನನ್ನು ಬಾಲ ನ್ಯಾಯಮಂಡಳಿ (JJB) ಮುಂದೆ ಹಾಜರುಪಡಿಸಲಾಗಿದೆ.

0 Comments