ಪುತ್ತೂರು : 2017ರ ದರೋಡೆ ಪ್ರಕರಣದಲ್ಲಿ ನ್ಯಾಯಾಲಯದಿಂದ 41 ಬಾರಿ ಬಂಧನ ವಾರಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ನೆಲ್ಸನ್ ಸಿ.ವಿ. (38) ಎಂದು ಗುರುತಿಸಲಾಗಿದೆ.
ಡಿಸೆಂಬರ್ 22, 2017ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನುಗ್ಗಿದ್ದ ಮೂವರು ದುಷ್ಕರ್ಮಿಗಳು, ಮನೆಯವರನ್ನು ಪಿಸ್ತೂಲ್ ಹಾಗೂ ಚಾಕುವಿನಿಂದ ಬೆದರಿಸಿ, ಸುಮಾರು ₹2.88 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹6 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದಿದ್ದ ನೆಲ್ಸನ್, ಆಗಸ್ಟ್ 27, 2021ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ಆದೇಶವನ್ನು ನಿರಂತರ ಉಲ್ಲಂಘಿಸಿದ್ದರಿಂದ, ಆತನ ವಿರುದ್ಧ ಒಟ್ಟು 41 ಬಂಧನ ವಾರಂಟ್‌ಗಳು ಹೊರಡಿಸಲಾಗಿದ್ದವು.
ಜುಲೈ 8ರಂದು ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಎ., ಪಿ ಸಿ ಗಳಾದ ವಿನಾಯಕ್ ಹಾಗೂ ಶಿವರಾಜ್ ಅವರ ತಂಡ ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರ್‌ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ, ಆರೋಪಿಯ ವಿರುದ್ಧ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS), 2023ರ ಸೆಕ್ಷನ್ 269 ಅಡಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣವೂ ದಾಖಲಾಗಿದೆ.
.png)
0 Comments