ಮಂಜೇಶ್ವರ : ಯುವ ಪೀಳಿಗೆಯ ಹಲವರಿಗೆ ಹಲವು ಹವ್ಯಾಸಗಳಿರುತ್ತವೆ. ಕೆಲವು ಜೀವನದ ಅತಿರೇಕಕ್ಕೆ ತಲುಪಿಸಿದರೆ ಇನ್ನು ಕೆಲವು ಅಭಿನಂದನೆಗೆ ಪಾತ್ರರನ್ನಾಗಿಸುತ್ತದೆ. ಇಂತಹ ಸಾಧನೆಗೆ ಪಾತ್ರರಾದವರಲ್ಲಿ ಓರ್ವರಾಗಿದ್ದಾರೆ ಮೀಯಪದವು ಸಮೀಪದ ಯುವಕ ಆದರ್ಶ್ ಮದಂಗಲ್ಲು. ಇವರ ಬೈಕ್ ಸಂಚಾರದ ಹವ್ಯಾಸ ಇಂದು ಜೀವನದ ಮಹೋನ್ನತ ಸಾಧನೆಗೆ ಕಾರಣವಾಗಿದೆ. ಕಾಲೇಜ್ ರಜೆಯ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಬೈಕ್ ನಲ್ಲಿ ಏಕಾಂಗಿ ಆಗಿ ದೇಶ ಸುತ್ತುವ ಪ್ರಯತ್ನಕ್ಕಿಳಿದ ಆದರ್ಶ್ ಜೂನ್ 21 ರ ಬೆಳಿಗ್ಗೆ ಮನೆಯಿಂದ ಬೈಕಿನಲ್ಲಿ ಹೊರಟು ಭಾರತದ ಪವಿತ್ರ ಏಳು ಜ್ಯೋತಿರ್ಲಿಂಗದ ದರ್ಶನ ಪಡೆದು ಖರ್ಡುಂಗ್ ಲ ಎನ್ನುವಲ್ಲಿಯವರಗೆ ಪ್ರಯಾಣಿಸಿ ಅಲ್ಲಿಂದ ಲಡಾಕ್, ಕಾರ್ಗಿಲ್, ಶ್ರೀನಗರ ಆಗಿ ಬೇರೆ ಬೇರೆ ರಾಜ್ಯಗಳ ಮೂಲಕ ಬೈಕ್ ನಲ್ಲಿ ಜುಲೈ 19 ರ ಸುಮಾರಿಗೆ ತವರೂರಿಗೆ ಮರಳುವ ಯಾತ್ರೆಯಲ್ಲಿದ್ದಾರೆ.
ಕಾಲೇಜ್ ದಿನಗಳಲ್ಲಿ ಸ್ವತಃ ದುಡಿದು ಸಂಪಾದಿಸಿದ ಹಣದಿಂದಲೇ ಬೈಕ್ ಪ್ರಯಾಣದ ಖರ್ಚು ವೆಚ್ಚ ಭರಿಸಿದ ಈ ಯುವಕನ ಏಕಾಂಗಿ ಸಾಧನೆ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ. ಮದಂಗಲ್ಲು ನಿವಾಸಿ ಕೇಶವ ಪ್ರಕಾಶ್ ಮತ್ತು ಪ್ರಸ್ತುತ ಕ್ಯಾಂಪ್ಕೋ ನಿರ್ದೇಶಕಿ ಸೌಮ್ಯ ಪ್ರಕಾಶ್ ಇವರ ಸುಪುತ್ರನಾದ ಆದರ್ಶ್ ಈಗ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ನ ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾನೆ.


0 Comments