ಪಾಲಕ್ಕಾಡು : ಮಾದಕ ವಸ್ತು ಸಾಗಣೆ ತಡೆಗಟ್ಟುವ ಉದ್ದೇಶದಿಂದ ನಡೆಸುತ್ತಿದ್ದ 'ಆಪರೇಷನ್ ತೂಫಾನ್' ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ರಜೆಯಲ್ಲಿದ್ದ ಭಾರತೀಯ ಸೇನಾ ಯೋಧನೆಂಬುದಾಗಿ ತಿಳಿದು ಬಂದಿದೆ.
ಪಾಲಕ್ಕಾಡು ಜಿಲ್ಲೆಯ ಮಣ್ಣಾರ್ಕಾಡು ನಿವಾಸಿ ಜಿನೇಶ್ ರಾಂಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯಲ್ಲಿ ಊರಿಗೆ ಬಂದಿದ್ದನು. ಸ್ನೇಹಿತರೊಂದಿಗೆ ಮಲಂಬುಲಕ್ಕೆ ತೆರಳಿ ಹಿಂದಿರುಗುವ ವೇಳೆ ಧೋಣಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮಾದಕ ವಸ್ತು ಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದ ಪೊಲೀಸರನ್ನು ಕಾರಿನಲ್ಲಿದ್ದ ಆರೋಪಿಗಳು ಪ್ರಶ್ನಿಸಿ, ಬಳಿಕ ಹಲ್ಲೆ ನಡೆಸಿದರು. ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದ ಎಸ್‌ಐ ಜಾನ್ ಸೇವಿಯರ್ ಅವರ ಮೇಲೆ ಮೊದಲಿಗೆ ಹಲ್ಲೆ ನಡೆದಿದ್ದು, ಹಿಂಬದಿ ಆಸನದಲ್ಲಿದ್ದ ಜಿನೇಶ್ ಅವರ ಮುಖಕ್ಕೆ ಹೊಡೆದು ಕನ್ನಡಕವನ್ನು ಒಡೆದಿದ್ದಾನೆ.
ಇದನ್ನು ತಡೆಯಲು ಮುಂದಾದ ಮಹಿಳಾ ಎಸ್‌ಐ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತೊಬ್ಬ ಆರೋಪಿ ಎಸ್‌ಐ ಜಾನ್ ಸೇವಿಯರ್ ಅವರ ಕುತ್ತಿಗೆಗೆ ಕಾಲಿಟ್ಟು ಉಸಿರುಗಟ್ಟಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡದೊಂದಿಗೆ ಇದ್ದ ಹೋಮ್‌ಗಾರ್ಡ್ ಮಾಹಿತಿ ನೀಡಿದ ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

0 Comments