ರಾಯಚೂರು : ಸಿಂಧನೂರಿನಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ಪ್ರಜೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಂಧನೂರು 2 ನೇ ಅಧಿಕ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ತೀರ್ಪು ನೀಡಿದೆ.
ಆರೋಪಿ ಶೋರನಜಿತ್ ಮಂಡಲ್‌ಗೆ ನ್ಯಾಯಾಲಯ 3 ವರ್ಷ ಸಜೆ ಮತ್ತು 5,000 ರೂ. ದಂಡ ವಿಧಿಸಿದೆ. ಸಿಂಧನೂರು ತಾಲೂಕಿನ ಆರ್‌ಎಚ್ ಕ್ಯಾಂಪ್ 3 ರಲ್ಲಿ 12 ವರ್ಷಗಳಿಂದ ವಾಸಿಸುತ್ತಿದ್ದ ಶೋರನಜಿತ್ ಮಂಡಲ್ ಬಾಂಗ್ಲಾ, ವಲಸಿಗರು ವಾಸಿಸುತ್ತಿರುವ ಆರ್‌ಎಚ್ ಕ್ಯಾಂಪ್ 3 ರಲ್ಲಿ ಸೇರಿಕೊಂಡಿದ್ದ. ನಕಲಿ ದಾಖಲೆಗಳನ್ನು ಸೃಷ್ಟಿಸಿ 2018 ರಲ್ಲಿ ಭಾರತದಲ್ಲಿ ಪಾಸ್‌ಪೋರ್ಟ್ ಪಡೆದಿದ್ದ ಆರೋಪಿ ಬಾಂಗ್ಲಾದೇಶದಲ್ಲಿನ ತಂದೆ-ತಾಯಿಯನ್ನು ನೋಡಲು ವಾಪಸ್ ಮರಳುವಾಗ ಸಿಕ್ಕಿಬಿದ್ದಿದ್ದ. ಮುಖ್ಯ ಇಮಿಗ್ರೇಷನ್ ಅಧಿಕಾರಿ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಭಾರತೀಯ ಪ್ರಜೆಯಲ್ಲ ಎಂಬ ಸತ್ಯ ಬಯಲಾಗಿತ್ತು. ಆರೋಪಿ ಬಳಿಯಿದ್ದ ಭಾರತೀಯ ಪಾಸ್‌ಪೋರ್ಟ್‌ನ್ನು ವಶಕ್ಕೆ ಪಡೆದಿದ್ದರು. 2018 ರಲ್ಲಿ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತೀರ್ಪು ಈಗ ಪ್ರಕಟವಾಗಿದ್ದು, ಶಿಕ್ಷೆ ಬಳಿಕ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ ಕೊಡಲು ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ.

0 Comments