ಮಲಪ್ಪುರ : ಮಲಪ್ಪುರ ಜಿಲ್ಲೆಯ ಕುಟ್ಟಿಪ್ಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಒಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಕೋಝಿಕ್ಕೋಡ್‌ನ ಪೆರುವಯಲ್ ನಿವಾಸಿ ವೈಷ್ಣವ್ ಎಂದು ಗುರುತಿಸಲಾಗಿದೆ.
ಕೋಝಿಕ್ಕೋಡ್–ತ್ರಿಶೂರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ 'ಡಿಫೆಂಡರ್' ಲಿಮಿಟೆಡ್ ಸ್ಟಾಪ್ ಖಾಸಗಿ ಬಸ್ ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು, ಬಳಿಕ ಡಿವೈಡರ್‌ಗೆ ಅಪ್ಪಳಿಸಿ ಕಾರಿನ ಮೇಲೆ ತಲೆಕೆಳಗಾಗಿ ಉರುಳಿಬಿದ್ದಿದೆ. ಪರಿಣಾಮ ಬಸ್ ಹಾಗೂ ಕಾರು ಎರಡೂ ಸಂಪೂರ್ಣ ಜಖಂಗೊಂಡಿವೆ. ಅಪಘಾತದ ನಂತರ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಬಸ್‌ನ ಒಂದು ಭಾಗವನ್ನು ಕತ್ತರಿಸಿ ಹೊರತೆಗೆದರು. ಗಾಯಗೊಂಡ 20 ಮಂದಿಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕುಟ್ಟಿಪ್ಪುರಂ, ವಳಾಂಚೇರಿ ಹಾಗೂ ಕೊಟ್ಟಕ್ಕಲ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿಯಲ್ಲಿನ ದೋಷವೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಸ್ ಅತಿವೇಗದಲ್ಲಿ ಸಂಚರಿಸುತ್ತಿತ್ತೇ ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಮಲಪ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೈತ್ರಾ ತೆರೆಸಾ ಜಾನ್ ತಿಳಿಸಿದ್ದಾರೆ.

0 Comments