ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ಮಂಗಳವಾರ ಸಂಜೆ ಬಂಧಿಸುವುದರೊಂದಿಗೆ ಕಾರ್ಯಕರ್ತರ ಪ್ರತಿಭಟನೆಯ ಕಾವಿಗೆ ಕಿಚ್ಚುಹಚ್ಚಿದಂತಾಗಿದೆ. . ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಎದುರು ನಡೆದ ಪ್ರತಿಭಟನೆಯನ್ನು ಪೊಲೀಸರು ಬಲಪ್ರಯೋಗದ ಮೂಲಕ ಚದುರಿಸಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಹಿನ್ನೆಲೆ ಪ್ರತಿಭಟನೆ ತೀವ್ರಗೊಂಡಿತು. ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಮತ್ತು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ದಾಳಿಗಳ ಕುರಿತು ಸ್ವತಂತ್ರ ತನಿಖೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕು ಎಂಬ ಬೇಡಿಕೆಗಳನ್ನು ಕಾಂಗ್ರೆಸ್ ಮುಂದಿಟ್ಟಿತ್ತು. ಅತೀ ಭದ್ರತಾ ವಲಯವಾದ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸದ ಎದುರು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡರು. ಕಾಂಗ್ರೆಸ್ ಇಂದು ರಾತ್ರಿ ಪೂರ್ತಿ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿತ್ತು.
0 Comments