ಕಾಸರಗೋಡು: ಮಲಯಾಳಂ ಭಾಷಾ ಅಧಿನಿಯಮ 2025ರ ಅಡಿಯಲ್ಲಿ ಕೇರಳದ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಶೈಕ್ಷಣಿಕ ಮತ್ತು ಭಾಷಿಕ ಹಕ್ಕುಗಳನ್ನು ಸಂಪೂರ್ಣವಾಗಿ ಸಂರಕ್ಷಿಸಲು ಕಾಯ್ದೆಯ ಕಲಂ 6(1) ಕ್ಕೆ ತುರ್ತು ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ನಿಯೋಗವು ಕೇರಳದ ವಿದ್ಯಾಭ್ಯಾಸ ಮಂತ್ರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ವಿಸ್ತೃತ ಮನವಿ ಸಲ್ಲಿಸಿತು.
ಮಲಯಾಳಂ ಭಾಷಾ ಅಧಿನಿಯಮ 2025ರಲ್ಲಿಯೇ "ಭಾಷಾ ಅಲ್ಪಸಂಖ್ಯಾತರು" ಎಂದರೆ ಸಂಪ್ರದಾಯಬದ್ಧವಾಗಿ ಕನ್ನಡ ಮತ್ತು ತಮಿಳು ಭಾಷೆಗಳನ್ನು ಬಳಸುವವರು ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಕಾಯ್ದೆಯ ಕಲಂ 7 ರ ಅಡಿಯಲ್ಲಿ ನೀಡಲಾಗಿರುವ ರಕ್ಷಣೆಯು ಅಸ್ತಿತ್ವದಲ್ಲಿರುವ ಆತಂಕಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಕಾಗುವುದಿಲ್ಲ. ಆದ್ದರಿಂದ, ಕಾಯ್ದೆಯ ಕಲಂ 6(1) ಕ್ಕೆ ದ್ವಂದ್ವರಹಿತ ತಿದ್ದುಪಡಿ ತರಬೇಕು ಎಂದು ನಿಯೋಗವು ಬಲವಾಗಿ ಒತ್ತಾಯಿಸಿತು.
"ಕೇರಳ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಪ್ರಥಮ ಭಾಷೆಯಾಗಿರಬೇಕು; ಆದರೆ ರಾಜ್ಯದ ಭಾಷಾ ಅಲ್ಪಸಂಖ್ಯಾತರ ವಿಷಯದಲ್ಲಿ ಈ ನಿಬಂಧನೆ ಅನ್ವಯಿಸುವುದಿಲ್ಲ."
ಈ ತಿದ್ದುಪಡಿಯಿಂದ ಮಾತ್ರ ಭಾಷಾ ಅಲ್ಪಸಂಖ್ಯಾತರ ಶೈಕ್ಷಣಿಕ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಸಾಧ್ಯ ಎಂದು ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಕನ್ನಡ ಮಾಧ್ಯಮ ಶಾಲೆಗಳು ಮತ್ತು ಶಿಕ್ಷಕರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದ ನಿಯೋಗವು ಈ ಕೆಳಗಿನ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿತು.
ಕನ್ನಡ ಮಾಧ್ಯಮದ ಶಿಕ್ಷಕರಿಗೆ ಸಕಾಲದಲ್ಲಿ ಅಧಿಕೃತ ಅಧ್ಯಾಪಕರ ಕೈಪಿಡಿಯನ್ನು ಒದಗಿಸಬೇಕು.
ಕಲೋತ್ಸವದಲ್ಲಿ ಕನ್ನಡ ಸ್ಪರ್ಧೆಗಳು: ಶಾಲಾ ಕಲೋತ್ಸವಗಳಲ್ಲಿ ಕನ್ನಡ ಭಾಷಿಕ ವಿದ್ಯಾರ್ಥಿಗಳಿಗೆ ಪೂರಕವಾದ ಸ್ಪರ್ಧೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು.
ಕನ್ನಡ ಮಾಧ್ಯಮದ ಲೋವರ್ ಪ್ರೈಮರಿ (LPST) ಮತ್ತು ಅಪ್ಪರ್ ಪ್ರೈಮರಿ (UPST) ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು.
ಪ್ರೀ-ಪ್ರೈಮರಿ ವಿಭಾಗದ ಕನ್ನಡ ಅಧ್ಯಾಪಕರ ನೇಮಕಾತಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸಬೇಕು. ಅನುದಾನಿತ ಶಾಲೆಗಳಲ್ಲಿ RPWD (ವಿಕಲಚೇತನರ ಹಕ್ಕುಗಳ ಕಾಯ್ದೆ) ಅಡಿಯಲ್ಲಿ ದಿನವೇತನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರ ನೇಮಕಾತಿಯನ್ನು ಖಾಯಂಗೊಳಿಸಬೇಕು ಮತ್ತು ಅದಕ್ಕಿರುವ ಕಾನೂನಾತ್ಮಕ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಬೇಕು.
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಸುದೀರ್ಘ ಅಹವಾಲುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಕೇರಳ ವಿದ್ಯಾಭ್ಯಾಸ ಮಂತ್ರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿಯವರು, ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ಗಂಭೀರವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ನಿಯೋಗದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ ಎ. ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.

0 Comments