ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಳಂ ಸಮೀಪದ ಪಳಞ್ ಪ್ರದೇಶದಲ್ಲಿ ಕುಟುಂಬ ಸದಸ್ಯರೆಲ್ಲರೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಕುಟುಂಬದ ಯಜಮಾನ ಸಿಬಿ ಹಾಗೂ ಅವರ 19 ವರ್ಷದ ಪುತ್ರಿ ಅಲೀನಾ ಮೃತಪಟ್ಟಿದ್ದು, ಪತ್ನಿ ಬೀನಾ ಮತ್ತು ಪುತ್ರ ಆದಿತ್ಯನ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಿಂದ ಪತ್ತೆಯಾದ ಡೆತ್ ನೋಟ್‌ನಲ್ಲಿ "ಜೀವನ ಸಾಕಾಯಿತು... ನಾವು ಹೋಗುತ್ತಿದ್ದೇವೆ" ಎಂಬ ಸಾಲು ಮಾತ್ರ ಇದ್ದು, ಆರ್ಥಿಕ ಸಂಕಷ್ಟದ ಕುರಿತು ಯಾವುದೇ ಉಲ್ಲೇಖ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯೋಗ ಕಳೆದುಕೊಂಡಿದ್ದ ಸಿಬಿ, ಕೆಲವು ದಿನಗಳ ಹಿಂದಷ್ಟೇ ಕತಾರ್‌ನಿಂದ ಸ್ವದೇಶಕ್ಕೆ ಮರಳಿದ್ದರು. ಮನೆಗೆ ಬಂದ ಬಳಿಕ ಅವರು ಹೊರಗೆ ಕಾಣಿಸಿಕೊಂಡಿರಲಿಲ್ಲ. ಘಟನೆಯ ದಿನವೂ ಕುಟುಂಬದ ಯಾರನ್ನೂ ನೆರೆಹೊರೆಯವರು ನೋಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಪುತ್ರ ಆದಿತ್ಯನ್ ಮೂಲಕವೇ ಹೊರಬಂದಿದೆ. ಆತ ತನ್ನ ಸಂಬಂಧಿಕರಿಗೆ ಕರೆ ಮಾಡಿ, "ಅಪ್ಪ, ಅಕ್ಕ ಮತ್ತು ಅಮ್ಮ ಮೃತಪಟ್ಟಿದ್ದಾರೆ" ಎಂದು ತಿಳಿಸಿದ್ದಾನೆ. ಬಳಿಕ ಮನೆಗೆ ಧಾವಿಸಿದ ನೆರೆಹೊರೆಯವರು ಹಾಗೂ ಸಂಬಂಧಿಕರು ಮನೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ಕಂಡು ಆಸ್ಪತ್ರೆಗೆ ಸಾಗಿಸಿದರು.
ಆದಿತ್ಯನ್ ಕೂಡ ವಿಷ ಸೇವಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೀನಾ ಅವರ ದೇಹದಲ್ಲಿ ಗಾಯಗಳಿದ್ದು, ಕೈ ನರವನ್ನು ಕತ್ತರಿಸಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. "ಭಯದಿಂದ ಬಾವಿಗೆ ಹಾರಲಿಲ್ಲ" ಎಂದು ಆದಿತ್ಯನ್ ಹೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

0 Comments