ಕುಂಬಳೆ : ಕುಂಬಳೆ–ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಭಾಸ್ಕರನಗರ ಸಮೀಪ ಪದೇ ಪದೇ ಅಪಘಾತಗಳುಂಟಾಗುತ್ತಿದ್ದು ನಿಯಂತ್ರಣ ತಪ್ಪಿದ ವಾಹನಗಳು ರಸ್ತೆ ಬದಿಯ ತೋಡಿಗೆ ಉರುಳುವುದು ಮತ್ತು ಡಿವೈಡರ್ ಗೆ ಗುದ್ದಿ ಪ್ರಾಣ ಹಾನಿಯಾಗುವ ದುರ್ಘಟನೆಗಳು ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸೀಮಿತ ವೇಗದಲ್ಲಿದ್ದರೂ ಕೂಡಾ ಅಪಘಾತಗಳುಂಟಾದ ಉದಾಹರಣೆಗಳು ಧಾರಾಳ ಇವೆ. ವಿಸ್ಮಯ ಅಂದರೆ ಇಲ್ಲಿ ಯಾವುದೇ ವಾಹನಗಳು ಎದುರು ಬದುರಾಗಿ ಡಿಕ್ಕಿ ಹೊಡೆದು ಅಪಘಾತಗಳುಂಟಾಗುತ್ತಿಲ್ಲ ಬದಲಿಗೆ ಈ ಸ್ಪಾಟ್ ಗೆ ಸಮೀಪಿಸಿದಾಗ ಹಲವರ ವಾಹನ ತನ್ನಂತಾನೇ ನಿಯಂತ್ರಣ ಕಳೆದುಕೊಂಡಿರುವುದು ಭಾಸವಾಗುತ್ತಿದೆ. ಇತ್ತೀಚೆಗೆ ಒಂದೇ ಕುಟುಂಬದ ಮೂವರು ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ಕಳತ್ತೂರು ಉಳುವಾರು ನಿವಾಸಿಗಳಾದ ಮುಹಮ್ಮದ್, ಅವರ ಪತ್ನಿ ಮರಿಯುಮ್ಮ ಹಾಗೂ ಪುತ್ರ ಜಲೀಲ್ ಎಂದು ಗುರುತಿಸಲಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಬಳೆಯಿಂದ ನಾಯ್ಕಾಪು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೋಡಿಗೆ ಉರುಳಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇದೇ ರಸ್ತೆಯ ಈ ಭಾಗದಲ್ಲಿ 25ಕ್ಕೂ ಹೆಚ್ಚು ವಾಹನ ಅಪಘಾತಗಳು ಸಂಭವಿಸಿವೆ. ಈ ಪ್ರದೇಶವನ್ನು ಅಪಘಾತ ವಲಯವೆಂದು ಘೋಷಿಸಿ ಎಚ್ಚರಿಕೆ ಫಲಕ ಅಳವಡಿಸುವುದು, ವೇಗ ನಿಯಂತ್ರಕ ಹಾಗೂ ರಸ್ತೆ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಯಲು ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತೊಮ್ಮೆ ಒತ್ತಾಯಿಸಿದ್ದಾರೆ. ಜನ ಸಾಮಾನ್ಯರಾದ ವಾಹನ ಪ್ರಯಾಣಿಕರ ಪ್ರಾಣ ಹಿಂಡುತ್ತಿರುವ ಅದೃಶ್ಯ ಅಗೋಚರ ಶಕ್ತಿ ಯಾವುದೆಂದು ಇನ್ನೂ ನಾಗರಿಕರು ಆಡಿಕೊಳ್ಳುವಂತಾಗಿದೆ.

0 Comments