ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮಗು ಜನಿಸಿದ ನಂತರ ವಂಚನೆ ಎಸಗಿದ ಆರೋಪ ಎದುರಿಸುತ್ತಿರುವ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದಲ್ಲಿ, ಸಂತ್ರಸ್ತೆ ಹಾಗೂ ಮಗುವಿನ ಪಾಲನೆಗಾಗಿ ತಿಂಗಳಿಗೆ ₹75 ಸಾವಿರ ನೀಡುವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಪ್ರಕರಣದ ಅಂತಿಮ ತೀರ್ಪು ಬರುವವರೆಗೆ, ಆರೋಪಿ ಸ್ವತಃ ಅಥವಾ ಅವರ ಪೋಷಕರ ಮೂಲಕ ಪ್ರತಿ ತಿಂಗಳ 2ನೇ ತಾರೀಖಿನೊಳಗೆ ಯಾವುದೇ ವಿಳಂಬವಿಲ್ಲದೆ ₹75 ಸಾವಿರ ಪಾವತಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ನಿರ್ದೇಶಿಸಿದ್ದಾರೆ.
ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಈ ಹಿಂದೆ ಪರಿಗಣಿಸಿತ್ತು. ಅದರಂತೆ, ಎರಡೂ ಪಕ್ಷಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿವೆ. ಸಂತ್ರಸ್ತೆ ಹಾಗೂ ಆಕೆಯ ತಾಯಿ, ಆರೋಪಿಯ ತಂದೆ ಮತ್ತು ಸಂಬಂಧಿಕರೊಬ್ಬರು ಮಧ್ಯಸ್ಥಿಕೆ ಕೇಂದ್ರಕ್ಕೆ ಖುದ್ದಾಗಿ ಹಾಜರಾಗಿದ್ದರೆ, ಆರೋಪಿ ಕೃಷ್ಣ ಜೆ. ರಾವ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆದಾರರಾದ ವಕೀಲೆ ಸುಶೀಲಾ ಅವರು ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಜುಲೈ 1ರಂದು ನಡೆದ ವಿಚಾರಣೆ ವೇಳೆ ಮಧ್ಯಸ್ಥಿಕೆ ಕೇಂದ್ರದ ವರದಿ ಸಲ್ಲಿಕೆಯಾದ ಬಳಿಕ ಪ್ರಕರಣದ ಮೆರಿಟ್ ಆಧರಿಸಿ ಮುಂದಿನ ಆದೇಶ ನೀಡುವುದಾಗಿ ನ್ಯಾಯಾಲಯ ತಿಳಿಸಿದೆ.
.jpeg)
0 Comments