Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಶಿಕ್ಷಣದ ಹಕ್ಕಿಗಾಗಿ ಧ್ವನಿಯಾದ ಹೋರಾಟಗಾರ್ತಿ - ಮಲಾಲಾ ಯೂಸುಫ್‌ ಜಾಯ್

                                                                                                                        ಸಾಂದರ್ಭಿಕ ಚಿತ್ರ

ನಾವು ಪ್ರತಿನಿತ್ಯ ಹಲವಾರು ವಿಶೇಷ ದಿನಗಳನ್ನು ಆಚರಿಸುತ್ತೇವೆ. ಅಂತಹಾ ವಿಶೇಷ ದಿನಗಳಲ್ಲಿ ಜುಲೈ 12ರಲ್ಲಿ ಆಚರಿಸಲಾಗುವ '
ಅಂತಾರಾಷ್ಟ್ರೀಯ ಮಲಾಲಾ ದಿನ'ವೂ ಒಂದು. ಬಾಲಕಿಯರ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫ್‌ ಜಾಯ್  ಅವರ ಜನ್ಮದಿನದ ಅಂಗವಾಗಿ ಜುಲೈ 12ರಂದು ಪ್ರತಿ ವರುಷ ವಿಶ್ವದಾದ್ಯಂತ 'ಅಂತಾರಾಷ್ಟ್ರೀಯ ಮಲಾಲಾ ದಿನ'ವನ್ನು ಆಚರಿಸಲಾಗುತ್ತದೆ. ಶಿಕ್ಷಣ ಎಂಬುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಎಂಬ ಸಂದೇಶವನ್ನು ವಿಶ್ವದಾದ್ಯಂತ ಸಾರುವುದೇ ಈ ದಿನದ ಪ್ರಮುಖ ಉದ್ದೇಶ.

ಮಲಾಲಾ ಯೂಸಫ್‌ ಅವರು ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ. ಬಾಲಕಿಯರಿಗೂ ಶಿಕ್ಷಣ ಪಡೆಯುವ ಹಕ್ಕು ಇರಬೇಕು ಎಂದು ಧೈರ್ಯದಿಂದ ಧ್ವನಿ ಎತ್ತಿದ ಮಹಾನ್ ಹೋರಾಟಗಾರ್ತಿ. ಇದೇ ಕಾರಣದಿಂದ 2012ರಲ್ಲಿ ತಾಲಿಬಾನ್ ಉಗ್ರರು ಮಲಾಲ ಅವರ ಮೇಲೆ ಗುಂಡಿನ ದಾಳಿ ಮಾಡಿದರು. ಆದರೆ ಮಲಾಲ ಅವರು ತಮ್ಮ ಹೋರಾಟವನ್ನು ಅಷ್ಟಕ್ಕೇ ನಿಲ್ಲಿಸಲಿಲ್ಲ. ಆ ಘಟನೆಯ ನಂತರವೂ ಅವರು ಶಿಕ್ಷಣಕ್ಕಾಗಿ ತಮ್ಮ ಹೋರಾಟವನ್ನು ಮುಂದುವರಿಸುತ್ತಾ ಇದ್ದರು. ಅವರ ಈ ಸೇವೆಯನ್ನು ಗುರುತಿಸಿ 2014ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಲಾಲಾ ಅವರ ಜೀವನಗಾಥೆಯು, ಸಮಸ್ಯೆಗಳಿಗೆ ಹೆದರದೆ ಸತ್ಯ ಮತ್ತು ಜ್ಞಾನಕ್ಕಾಗಿ ಹೋರಾಡಿದರೆ ಜಗತ್ತನ್ನೇ ಬದಲಿಸಬಹುದು ಎಂಬ ಸಂದೇಶವನ್ನು ನಮಗೆ ನೀಡುತ್ತದೆ.

ಈಗಲೂ ವಿಶ್ವದಲ್ಲಿ ಅನೇಕ ಮಕ್ಕಳು ಬಡತನ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹಗಳಂತಹ ಅನೇಕ  ಕಾರಣಗಳಿಂದ ಶಾಲೆಯಿಂದ ದೂರ ಉಳಿದಿದ್ದಾರೆ. ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬ ಮಗು ಬಾಲಕಾರ್ಮಿಕನಾಗಿ ದುಡಿಯುತ್ತಿದ್ದು, ಸುಮಾರು 65 ಕೋಟಿ ಮಹಿಳೆಯರು ಬಾಲ್ಯದಲ್ಲಿಯೇ ವಿವಾಹವಾಗಿದ್ದಾರೆ. ಪ್ರತಿವರ್ಷ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 1.2 ಕೋಟಿ  ಬಾಲಕಿಯರು ಬಾಲ್ಯವಿವಾಹಕ್ಕೆ ಗುರಿಯಾಗುತ್ತಿದ್ದಾರೆ. ಹಿಂದುಳಿದ ದೇಶಗಳಲ್ಲಿ ಇಂತಹ ಭೀಕರ ಪರಿಸ್ಥಿತಿ ಕಂಡುಬರುತ್ತಿದೆ. ಇದು ಶಿಕ್ಷಣದ ಹಕ್ಕಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ಇದರ ಜೊತೆಗೆ ತರಬೇತಿ ಪಡೆದ ಶಿಕ್ಷಕರ ಕೊರತೆ, ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ, ಕಲಿಕಾ ಸಾಮಗ್ರಿಗಳ ಕೊರತೆ, ಕುಟುಂಬದ ಆರ್ಥಿಕ ಸಮಸ್ಯೆಗಳು ಹಾಗೂ ಡಿಜಿಟಲ್ ಸೌಲಭ್ಯಗಳ ಕೊರತೆಯೂ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್‌ ಸೌಲಭ್ಯವಿಲ್ಲದ ಮಕ್ಕಳು ಶಿಕ್ಷಣ ಮತ್ತು ಹೊಸ ಅವಕಾಶಗಳಿಂದ ವಂಚಿತರಾಗುವುದನ್ನು ನಾವು ಗಮನಿಸುತ್ತಿದ್ದೇವೆ.

ಮಲಾಲಾ ದಿನವು ಕೇವಲ ಆಚರಣೆಯ ದಿನ ಮಾತ್ರವಲ್ಲ ಇದು ಶಿಕ್ಷಣದ ಹಕ್ಕನ್ನು ಕಾಪಾಡುವ ಒಂದು ಸಂಕಲ್ಪದ ದಿನವಾಗಿದೆ. ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು, ಶಿಕ್ಷಣದ ಬಗ್ಗೆ ಬೆಂಬಲ ನೀಡಬೇಕು. ಶಾಲಾ ಶುಲ್ಕ ಪಾವತಿಸಲು ನೆರವಾಗುವುದು, ಪುಸ್ತಕಗಳು ಹಾಗೂ ಶಾಲಾ ಸಾಮಗ್ರಿಗಳನ್ನು ಒದಗಿಸುವುದು, ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ನೆರವಾಗುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ.

ಮಲಾಲಾ ಅವರು ಹೇಳುವಂತೆ, "ಒಂದು ಮಗು, ಒಬ್ಬ ಶಿಕ್ಷಕ, ಒಂದು ಪುಸ್ತಕ ಮತ್ತು ಒಂದು ಪೆನ್ನು ಜಗತ್ತನ್ನೇ ಬದಲಾಯಿಸಬಲ್ಲದು." ಜಗತ್ತಿನ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಉತ್ತೇಜಿಸುವುದು. ಅನ್ಯಾಯದ ವಿರುದ್ಧ ಹೋರಾಡುವ ಅಪ್ರತಿಮ ಧೈರ್ಯವನ್ನು ಯುವಜನತೆಗೆ ಪರಿಚಯಿಸುವುದು. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯುವುದು ಈ ದಿನಾಚರಣೆಯ ಮುಖ್ಯ ಉದ್ದೇಶಗಳಾಗಿವೆ.

ಶಿಕ್ಷಣವು ವ್ಯಕ್ತಿಯ ಬದುಕನ್ನು ಮಾತ್ರವಲ್ಲ , ಸಮಾಜ ಮತ್ತು ರಾಷ್ಟ್ರದ ಭವಿಷ್ಯವನ್ನೂ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಪ್ರತಿಯೊಂದು ಮಗುವಿಗೂ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದೇ ಮಲಾಲಾ ದಿನದ ನಿಜವಾದ ಸಂದೇಶವಾಗಿದೆ.

ಶ್ರಾವ್ಯಾ ಭಟ್ ಸ್ವರ್ಗ

ಪತ್ರಿಕೋದ್ಯಮ ವಿದ್ಯಾರ್ಥಿನಿ ಎಸ್ ಡಿ ಎಂ ಕಾಲೇಜು , ಉಜಿರೆ


Post a Comment

0 Comments

ಜಾಹೀರಾತು

Responsive Advertisement