ಅಹಮದಾಬಾದ್ : ಮೀಸಲು ಅರಣ್ಯ ಪ್ರದೇಶವೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಯುವಕನೋರ್ವ ಸಿಂಹದ ಚಿತ್ರವನ್ನು ತನ್ನ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿಯಲೆತ್ನಿಸಿದ್ದು ತಕ್ಷಣ ರೊಚ್ಚಿಗೆದ್ದ ಸಿಂಹ ದಾಳಿ ನಡೆಸಿ ಕಚ್ಚಿ ಕೊಂದು ಹಾಕಿದ ಘಟನೆ ಗುಜರಾತ್‌ನ ಅಮ್ರೆಲಿ ಜಿಲ್ಲೆಯ ಅಂಟಾಲಿಯಾ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಸೋಹಿಲ್ ಮೇಮನ್ (21) ಎಂದು ಗುರುತಿಸಲಾಗಿದೆ. ಸಿಂಹಗಳನ್ನು ಸಮೀಪದಿಂದ ನೋಡಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸುವ ಉದ್ದೇಶದಿಂದ ಸೋಹಿಲ್ ಹಾಗೂ ಆತನ ಇಬ್ಬರು ಸ್ನೇಹಿತರು ಕಾನೂನುಬಾಹಿರವಾಗಿ ಮೀಸಲು ಅರಣ್ಯದೊಳಗೆ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಸಿಂಹಗಳು ಸಂಭೋಗದಲ್ಲಿದ್ದವು. ಯುವಕರು ಅತ್ಯಂತ ಸಮೀಪಕ್ಕೆ ತೆರಳುತ್ತಿದ್ದಂತೆ ಆಕ್ರೋಶಗೊಂಡ ಗಂಡು ಸಿಂಹ ಸೋಹಿಲ್ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿಯಿಂದ ಭಯಗೊಂಡ ಸ್ನೇಹಿತರು ಸ್ಥಳದಿಂದ ಓಡಿ ತಪ್ಪಿಸಿಕೊಂಡರೆ, ಸಿಂಹ ಯುವಕನನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದೆ.
ಮಾಹಿತಿ ತಿಳಿದು ಅರಣ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಸಿಂಹವನ್ನು ಓಡಿಸಿ ಯುವಕನ ಮೃತದೇಹವನ್ನು ಹೊರತೆಗೆದರು. ಬಳಿಕ ದಾಳಿ ನಡೆಸಿದ ಸಿಂಹವನ್ನು ಅರಣ್ಯ ಇಲಾಖೆ ಮಾದಕ ಗುಂಡು ಹಾರಿಸಿ ಸೆರೆಹಿಡಿದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿದೆ. ಅಲ್ಲದೆ, ಗಿರ್ ಅರಣ್ಯ ಪ್ರದೇಶದ ಹೊರಭಾಗದಲ್ಲಿ ಕೆಲವು ಸ್ಥಳೀಯ ಏಜೆಂಟರು ನಡೆಸುತ್ತಿರುವ ಅಕ್ರಮ ಲಯನ್ ಸಫಾರಿ' ಕುರಿತು ಅರಣ್ಯ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಅಮ್ರೆಲಿ ಪ್ರದೇಶದಲ್ಲಿ ಸಿಂಹದಾಳಿಯಿಂದ ಮೃತಪಟ್ಟ ನಾಲ್ಕನೇ ಮಾನವ ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

0 Comments