ಕೊಚ್ಚಿ : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕುಂಭಮೇಳ 2025ರ ವೈರಲ್ ಯುವತಿ ಮೊನಾಲಿಸಾ ಭೋಸ್ಲೆ ಹಾಗೂ ಆಕೆಯ ಪತಿ ಫರ್ಮಾನ್ ಖಾನ್‌ಗೆ ಅಂತರ್ಧರ್ಮೀಯ ವಿವಾಹದ ಹಿನ್ನೆಲೆಯಲ್ಲಿ ಈ ದಂಪತಿಗೆ ನೀಡಲಾಗಿದ್ದ ಪೊಲೀಸ್ ರಕ್ಷಣೆಯನ್ನು ಕೇರಳ ಹೈಕೋರ್ಟ್ ಶುಕ್ರವಾರ ಅಧಿಕೃತವಾಗಿ ಹಿಂಪಡೆದಿದೆ. ದಂಪತಿಯನ್ನು ಪತ್ತೆಹಚ್ಚಲು ಅಥವಾ ಅವರೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕ ಸಾಧಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಅಧಿಕೃತ ವರದಿ ಸಲ್ಲಿಸಿದ ಬೆನ್ನಲ್ಲೇ, ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಏಕಸದಸ್ಯ ಪೀಠವು ಈ ಹಿಂದೆ ಜೂನ್ 19ರಂದು ಹೊರಡಿಸಿದ್ದ ಮಧ್ಯಂತರ ರಕ್ಷಣೆ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ನ್ಯಾಯಾಲಯದ ವಿಚಾರಣೆ ವೇಳೆ ಸರ್ಕಾರಿ ವಕೀಲರು ಮಾಹಿತಿ ನೀಡಿ, “ಅರ್ಜಿದಾರರು ಕೋರ್ಟ್‌ಗೆ ಯಾವುದೇ ನಿಖರವಾದ ಸಂಪರ್ಕ ಸಂಖ್ಯೆ ಅಥವಾ ಪ್ರಸ್ತುತ ವಾಸವಿರುವ ವಿಳಾಸವನ್ನು ಒದಗಿಸಿಲ್ಲ. ಈ ಕಾರಣದಿಂದಾಗಿ ಪೊಲೀಸರು ಅವರನ್ನು ಪತ್ತೆಹಚ್ಚಲು ಪದೇ ಪದೇ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಹೀಗೆ ದಿಢೀರನೆ ನಾಪತ್ತೆಯಾಗುವುದು ಮತ್ತು ತನಿಖೆಯಿಂದ ತಪ್ಪಿಸಿಕೊಳ್ಳುವುದು ಆ ಯುವತಿಯ ಹಳೆಯ ಚಾಳಿಯಾಗಿದೆ” ಎಂದು ಪೊಲೀಸರ ವರದಿಯನ್ನು ಕೋರ್ಟ್ ಗಮನಕ್ಕೆ ತರಲಾಗಿದೆ. ಇದೇ ವೇಳೆ ಮೊನಾಲಿಸಾ ಪರ ಹಾಜರಾಗಿದ್ದ ವಕೀಲರು ಕೂಡ ತಮ್ಮ ಕಕ್ಷಿದಾರರಿಂದ ತಮಗೆ ಯಾವುದೇ ಹೊಸ ಸೂಚನೆಗಳು ಅಥವಾ ಮಾಹಿತಿ ಬಂದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. “ನಾನು ಸದ್ಯ ಕೇರಳದಲ್ಲಿ ಇರುವುದರಿಂದಷ್ಟೇ ಬದುಕಿದ್ದೇನೆ. ಒಂದು ವೇಳೆ ನನ್ನ ತವರು ರಾಜ್ಯವಾದ ಮಧ್ಯಪ್ರದೇಶಕ್ಕೆ ಮರಳಿದರೆ, ನನ್ನನ್ನು ಖಂಡಿತವಾಗಿಯೂ ‘ಮರ್ಯಾದೆ ಹತ್ಯೆ’ (Honor Killing) ಮಾಡುತ್ತಾರೆ” ಎಂದು ಮೊನಾಲಿಸಾ ಈ ಹಿಂದೆ ನ್ಯಾಯಾಲಯಕ್ಕೆ ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಳು. ಆಕೆಯ ಪ್ರಾಣಭೀತಿಯನ್ನು ಪರಿಗಣಿಸಿ ಎರ್ನಾಕುಲಂ ಸೆಂಟ್ರಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರಿಗೆ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡುವಂತೆ ಸೂಚಿಸಿತ್ತು.
ಆದರೆ, ಈಗ ದಂಪತಿ ತಾವೇ ನೀಡಿದ ವಿಳಾಸದಿಂದ ನಾಪತ್ತೆಯಾಗಿರುವುದರಿಂದ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಮಹಿಳೆ ರಕ್ಷಣೆ ಕೋರಿ ಸ್ವತಃ ಲಿಖಿತವಾಗಿ ಪೊಲೀಸರನ್ನು ಸಂಪರ್ಕಿಸಿದರೆ ಮಾತ್ರ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಲಾಗಿದೆ.

0 Comments