ಮುಳ್ಳೇರಿಯ: ಬಿಜೆಪಿ ಕಾರ್ಯಕರ್ತರ ನಿರಂತರ ತರಬೇತಿ ಮತ್ತು ಸಂಘಟನಾ ಬಲವೇ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಹೇಳಿದರು. ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಬಿಜೆಪಿ ಬದಿಯಡ್ಕ ಮಂಡಲದ ಪ್ರಶಿಕ್ಷಣ ಮಹಾಭಿಯಾನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕೇರಳ ವಿಧಾನಸಭೆಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಪಕ್ಷದ ಪರವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಜನಸಂಘದ ಕಾಲದಿಂದಲೇ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸುವ ಪರಂಪರೆ ಬಿಜೆಪಿಯಲ್ಲಿದ್ದು, ಅದು ಇಂದಿಗೂ ನಿರಂತರವಾಗಿ ಮುಂದುವರಿದಿದೆ ಎಂದು ತಿಳಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದರೂ, ನಂತರ ಐದು ದಿನಗಳ ಅಧ್ಯಯನ ಶಿಬಿರ ನಡೆಸಿ ಮುಂದಿನ ಹೋರಾಟಗಳ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಕಾರ್ಯಕರ್ತರ ಸಂಘಟಿತ ಪರಿಶ್ರಮ, ಶಿಸ್ತು ಮತ್ತು ನಿರಂತರ ತರಬೇತಿಯೇ ಇಂದು ಬಿಜೆಪಿಯನ್ನು ಬೃಹತ್ ರಾಜಕೀಯ ಶಕ್ತಿಯನ್ನಾಗಿ ರೂಪಿಸಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ವಹಿಸಿದ್ದರು. ಶಿಬಿರಾಧಿಕಾರಿ ಮಣಿಕಂಠ ರೈ, ಸುಧಾಮ ಗೋಸಾಡ, ಶಿವಕೃಷ್ಣ ಭಟ್, ಸುಕುಮಾರ ಕುದ್ರೆಪಾಡಿ, ಹರೀಶ್ ನಾರಂಪಾಡಿ, ಶ್ರೀಧರ ಬೆಳ್ಳೂರು, ಶಂಕರ ಡಿ. ಬದಿಯಡ್ಕ, ಜನನಿ ಕಾರಡ್ಕ, ಯಶೋಧ ಕುಂಬ್ಡಾಜೆ, ಮಾಲಿನಿ ಬೆಳ್ಳೂರು, ಅಶ್ವಿನಿ ಕೆ.ಎಂ., ವಸಂತ ಕೆ., ಮುರಳೀಧರ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಅವಿನಾಶ್ ವಿ. ರೈ ವಂದಿಸಿದರು.


0 Comments