ರಾಯಚೂರು : ಕೇವಲ 10ರೂ. ಬಾಕಿ ಹಣದ ವಿವಾದ ಭೀಕರ ತಿರುವು ಪಡೆದು, ಜಗಳ ಬಿಡಿಸಲು ಬಂದಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರ ಹತ್ಯೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಹಂಚಿನಾಳ ಕ್ಯಾಂಪ್ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಮೃತರನ್ನು ಗಿಲ್ಲೆಸುಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೇಘನಾಥ್ (42) ಎಂದು ಗುರುತಿಸಲಾಗಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಯಾದ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್ ಮತ್ತು ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮಹೇಶ್ ಮತ್ತು ನಾಗರಾಜ್ ಎಂಬವರು ಬಾಟಲಿಗೆ ₹110 ಮೌಲ್ಯದ ಪೆಟ್ರೋಲ್ ತುಂಬಿಸಿಕೊಂಡು ₹100 ಮಾತ್ರ ಪಾವತಿಸಿದ್ದರು. ಉಳಿದ ₹10 ಹಣಕ್ಕಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಅವರ ನಡುವೆ ವಾಗ್ವಾದ ಆರಂಭವಾಗಿತ್ತು.
ಈ ವೇಳೆ ಅಲ್ಲಿಗೆ ಬಂದ ಮೇಘನಾಥ್ ಜಗಳ ಪರಿಹರಿಸಲು ಮುಂದಾದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮೇಘನಾಥ್ ಮೃತಪಟ್ಟಿದ್ದಾರೆ. ಎನ್ನಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಇಡಪನೂರು ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.

0 Comments