ಕೇರಳ : ಭೀಕರ ಟ್ರಾಫಿಕ್ ಜಾಮ್ ನಡುವೆ ಕಾರಿನೊಳಗೆ ತೀವ್ರ ಹೃದಯಾಘಾತಕ್ಕೊಳಗಾದ ಪೆರುಂಬವೂರ್ ಮೂಲದ ವ್ಯಕ್ತಿ ನಿವಾಸಿ ಸಿನಾಜ್ (38) ಎಂಬವರನ್ನು ಬೈಕರ್ ರಂಜಿತ್, ಅವರ ಸ್ನೇಹಿತ ಮುಹಮ್ಮದಾಲಿ ಹಾಗೂ ಅಂಗಮಾಲಿ ಆಡ್ಲಕ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಮತ್ತು ಕಾಲಡಿ ಮೂಲದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜು ಸೇರಿ ಕಾರ್ಯಾಚರಣೆ ನಡೆಸಿ, ಸಕಾಲದಲ್ಲಿ ಸಿಪಿಆರ್ (CPR) ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇವರ ಸಾಹಸದಿಂದ ಸಿನಾಜ್ ಅವರ ಪ್ರಾಣ ಉಳಿದಿದೆ. ಅಪರಿಚಿತ ವ್ಯಕ್ತಿಯ ಜೀವ ಉಳಿಸಲು ರಸ್ತೆಯಲ್ಲೇ ಒಗ್ಗಟ್ಟಿನಿಂದ ಹೋರಾಡಿದ ಇವರ ಸಮಯಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ.
ಜುಲೈ 01 ರಂದು ಬೆಳಿಗ್ಗೆ ಎರ್ನಾಕುಲಂನ ಕಾಲಡಿ ಸೇತುವೆಯ ಮೇಲೆ ಭೀಕರ ಟ್ರಾಫಿಕ್ ಜಾಮ್ ಉಂಟಾದ ವೇಳೆ ಸಿನಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ಹೊರಟಿದ್ದರು. ಆದರೆ ಟ್ರಾಫಿಕ್ ಮಧ್ಯೆ ಸಿಲುಕಿದಾಗ ಕಾರಿನ ಹ್ಯಾಜಾರ್ಡ್ ಲೈಟ್ಸ್ ಆನ್ ಮಾಡಿ ರಸ್ತೆಯ ಬದಿಗೆ ಚಲಿಸಲು ಯತ್ನಿಸುತ್ತಿದ್ದರು. ಇದೇ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದ ರಂಜಿತ್ ಅವರಿಗೆ ಅನುಮಾನ ಬಂದು ಕಾರಿನ ಬಳಿ ತೆರಳಿ ವಿಚಾರಿಸಿದಾಗ, ಸಿನಾಜ್ ತಮಗೆ ತೀರಾ ಎದೆನೋವಾಗುತ್ತಿದೆ ಎಂದು ತಿಳಿಸಿದ್ದಾರೆ. ತಕ್ಷಣವೇ ರಂಜಿತ್ ಕಾರಿನ ಮುಂದೆ ಹೋಗಿ ಟ್ರಾಫಿಕ್ ಕ್ಲಿಯರ್ ಮಾಡಲು ಯತ್ನಿಸುವ ವೇಳೆ ರಸ್ತೆಯಲ್ಲಿ ಸಿಕ್ಕ ಅವರ ಸ್ನೇಹಿತ ಮುಹಮ್ಮದಾಲಿ ಕೂಡ ನೆರವಿಗೆ ಧಾವಿಸಿ ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಆಂಬ್ಯುಲೆನ್ಸ್ ಬರುವ ಮೊದಲೇ ಸಿನಾಜ್ ಕಾರಿನ ಸ್ಟೀರಿಂಗ್ ಮೇಲೆಯೇ ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಸಿನಾಜ್ ಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಬೈಕರ್ ರಂಜಿತ್, ಒಂದು ಕ್ಷಣವೂ ತಡಮಾಡದೆ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಹತ್ತಿರದ ಖಾಸಗಿ ಬಸ್‌ನತ್ತ ಧಾವಿಸಿ, “ಬಸ್‌ನಲ್ಲಿ ಯಾರಾದರೂ ಆರೋಗ್ಯ ಕಾರ್ಯಕರ್ತರು ಅಥವಾ ನರ್ಸ್‌ಗಳು ಇದ್ದೀರಾ?” ಎಂದು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ನರ್ಸ್ ಅಂಜಲಿ ಬೈಜು ಹಾಗೂ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜು ತಕ್ಷಣವೇ ವಾಹನದಿಂದ ಕೆಳಕ್ಕೆ ಜಿಗಿದು ಕಾರಿನ ಬಳಿ ಓಡಿ ಬಂದಿದ್ದಾರೆ.
ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿನಾಜ್ ಅವರಿಗೆ ಇಬ್ಬರೂ ನರ್ಸ್‌ಗಳು ತಕ್ಷಣವೇ ಕಾರ್ಡಿಯೋಪಲ್ಮನರಿ ರಿಸಸಿಟೇಶನ್ ನೀಡಲು ಆರಂಭಿಸಿದರು. ಅವರ ಆರೈಕೆಯಿಂದಾಗಿ ಸಿನಾಜ್ ಅವರ ಹೃದಯ ಬಡಿತ ನಿಯಂತ್ರಣಕ್ಕೆ ಬಂದು ನಿಧಾನವಾಗಿ ಪ್ರಜ್ಞೆ ಮರಳಿತು. ಅಷ್ಟರಲ್ಲೇ ಆಂಬ್ಯುಲೆನ್ಸ್ ಸ್ಥಳಕ್ಕೆ ಬಂದು ಸಿನಾಜ್ ಅವರನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವಾಗ, ನರ್ಸ್ ಅಂಜಲಿ ಆಂಬ್ಯುಲೆನ್ಸ್‌ನ ಒಳಗೂ ಕುಳಿತು ಆಸ್ಪತ್ರೆ ತಲುಪುವವರೆಗೂ ನಿರಂತರವಾಗಿ ಸಿಪಿಆರ್ ಮಾಡುವುದನ್ನು ಮುಂದುವರಿಸಿದರು.
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಸಿನಾಜ್ ಅವರ ರಕ್ತನಾಳಗಳಲ್ಲಿ ತೀವ್ರ ಅಡಚಣೆ ಇರುವುದು ಪತ್ತೆಯಾಗಿದ್ದು, ವೈದ್ಯರು ತಕ್ಷಣವೇ ಆಂಜಿಯೋಪ್ಲ್ಯಾಸ್ಟಿ ಸರ್ಜರಿ ಯಶಸ್ವಿಯಾಗಿ ಪೂರೈಸಿದ್ದಾರೆ. ಸದ್ಯ ಸಿನಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. “ನಮ್ಮ ಸಿನಾಜ್ ಜೀವ ಉಳಿಸಿದ ಆ ಅಪರಿಚಿತ ದೇವದೂತರಿಗೆ ಧನ್ಯವಾದ ಹೇಳಲು ನಮ್ಮ ಬಳಿ ಪದಗಳೇ ಇಲ್ಲ” ಎಂದು ಸಿನಾಜ್ ಅವರ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

0 Comments