ಕೊಲ್ಲಂ : ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು ಕಲ್ಲಂಬಲಂ ಸಮೀಪದ ಚೆನ್ನನ್‌ಕೋಡ್ ನಿವಾಸಿ ಅರುಣ್ ಕೃಷ್ಣ (20) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸ್ನೇಹಿತರಾದ ಶ್ಯಾಮ್ ಹಾಗೂ ಬಾಲು ಅವರನ್ನು ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮುಂಜಾನೆ ಸುಮಾರು 1 ಗಂಟೆ ಸುಮಾರಿಗೆ ನಾವಾಯಿಕ್ಕುಳಂ ಸಮೀಪದ 28 ಮೈಲ್ ಮಂಗಾಟುವಾತುಕಲ್ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿದೆ. ಮೂವರು ಅಟ್ಟಿಂಗಲ್‌ನಿಂದ ಕೊಲ್ಲಂ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಮಧ್ಯದ ಕಬ್ಬಿಣದ ತಡೆಗೋಡೆಗೆ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಡೆಗೋಡೆ ಒಡೆದು ಬೈಕ್ ಪಕ್ಕದ ಸುರಕ್ಷತಾ ಕಂಬಿಗಳ ನಡುವೆ ನುಗ್ಗಿದೆ.
ಕಂಬಿಗಳ ನಡುವೆ ಸಿಲುಕಿದ್ದ ಅರುಣ್ ಕೃಷ್ಣ ಅವರನ್ನು ಸ್ಥಳೀಯರು ಹೊರತೆಗೆದರೂ, ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹವನ್ನು ಪಾರಿಪಳ್ಳಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.
.png)
0 Comments