ಬೆಳ್ಳೂರು : ಆಗಸ್ಟ್ 30ರಂದು ಬೆಳ್ಳೂರು ಗ್ರಾಮ ಪಂಚಾಯಿತಿಯ 12ನೇ ವಾರ್ಡ್ ವ್ಯಾಪ್ತಿಯ ಕಾಯಿಮಲೆ–ಗೋಳಿಕಟ್ಟೆಯಲ್ಲಿ ‘ಅವರ್ ಓಣಂ ಸೆಲೆಬ್ರೇಶನ್ – ಒಪ್ಪಂ 2ಕೆ26’ ಓಣಂ ಕಾರ್ಯಕ್ರಮ ನಡೆಯಲಿದೆ.
ಗೋಳಿಕಟ್ಟೆ ಕಮ್ಯುನಿಟಿ ಹಾಲ್ ಪರಿಸರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯ ಸಿದ್ದಿಕ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಬಿ. ಮನೋಹರ ಬಲ್ಲಾಳ್ ಉದ್ಘಾಟಿಸಲಿರುವರು. ಬೆಳ್ಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಕುಮಾರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಬೆಳಿಗ್ಗೆ 9.30ರಿಂದ ಸ್ಥಳೀಯರಿಂದ ತಿರುವಾದಿರ ಹಾಗೂ ಕೈಕೊಟ್ಟುಕಳಿ ಪ್ರದರ್ಶನ ನಡೆಯಲಿದೆ. ಬಳಿಕ ಬೆಳಿಗ್ಗೆ 10 ಗಂಟೆಯಿಂದ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಪೂಕಳಂ ಸ್ಪರ್ಧೆ, ಕಪ್ಪೆ ಜಿಗಿತ, ಬಾಲ್ ಪಾಸಿಂಗ್, ಮಿಠಾಯಿ ಹೆಕ್ಕುವುದು, ಬಿಸ್ಕಟ್ ಕಟ್ಟಿ ತಿನ್ನುವುದು, ಗ್ಲಾಸ್ ನಡಿಗೆ, ಸುಂದರಿಗೆ ಬೊಟ್ಟು ಹಾಕುವುದು ಹಾಗೂ ಸಂಗೀತ ಕುರ್ಚಿ ಸ್ಪರ್ಧೆಗಳು ನಡೆಯಲಿವೆ.
ಮಧ್ಯಾಹ್ನ ಓಣಂ ಸದ್ಯ ಆಯೋಜಿಸಲಾಗಿದ್ದು, ಬಳಿಕ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆ ಹಾಗೂ ಪುರುಷರಿಗೆ ಓಣಂ ತಲ್ಲೆ ಸ್ಪರ್ಧೆ ನಡೆಯಲಿದೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಉತ್ಸವ ಸಮಿತಿ ಅಧ್ಯಕ್ಷ ಮೋಹನಕೃಷ್ಣ ಬಲ್ಲಾಳ್ ಅಧ್ಯಕ್ಷತೆ ವಹಿಸಲಿರುವರು. ಕಲಾರತ್ನ, ಕಲಾವಿಭೂಷಣ ಹಾಗೂ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಬಿ. ಮಧುಸೂದನ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷೋತ್ತಮ, ಸದಸ್ಯರಾದ ಶ್ರೀಪತಿ, ಸಿದ್ದಿಕ್, ಆಸಿಫಾ ಸಂಶುದ್ದೀನ್, ಮಾಜಿ ಸದಸ್ಯ ಪಿ.ಕೆ. ಶೆಟ್ಟಿ, ನಂದಗೋಕುಲ ಸಾಂಸ್ಕೃತಿಕ ವೇದಿಕೆ ಗೋಳಿಕಟ್ಟೆ ಅಧ್ಯಕ್ಷ ಬಾಲಕೃಷ್ಣ ಜಿ. ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

0 Comments