ಕಾಸರಗೋಡು : ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊನೆಯ ಎರಡು ಪರಿಹಾರ ಶಿಬಿರಗಳನ್ನೂ ಮುಚ್ಚಲಾಗಿದೆ. ಇದರಿಂದ ಸದ್ಯ ಜಿಲ್ಲೆಯಲ್ಲಿ ಯಾವುದೇ ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು.
ತಯ್ಯೇನಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಆರಂಭಿಸಲಾಗಿದ್ದ ತಯ್ಯೇನಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪರಿಹಾರ ಶಿಬಿರವನ್ನು ಇದೀಗ ಮುಚ್ಚಲಾಗಿದೆ.
ಇದೇ ವೇಳೆ, ಕಳ್ಳಾರ್ ಗ್ರಾಮ ಪಂಚಾಯತ್‌ನ ಚುಳ್ಳಿಕ್ಕರ ಎಲ್.ಪಿ. ಶಾಲೆಯಲ್ಲಿ ಪ್ರವಾಹದ ಭೀತಿಯಿಂದ ಆರಂಭಿಸಲಾಗಿದ್ದ ಪರಿಹಾರ ಶಿಬಿರವನ್ನು ಕಳೆದ ದಿನವೇ ಮುಚ್ಚಲಾಗಿತ್ತು. ಶಿಬಿರದಲ್ಲಿದ್ದ ಕುಟುಂಬಗಳು ತಮ್ಮ ಮನೆಗಳಿಗೆ ಮರಳಿವೆ.
ಕಳ್ಳಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ. ರಜಿತಾ ಅವರ ನೇತೃತ್ವದಲ್ಲಿ ಶಿಬಿರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ಬಳಿಕ ಅದನ್ನು ಅಧಿಕೃತವಾಗಿ ಮುಚ್ಚಲಾಯಿತು.
ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ಯಾವುದೇ ಪರಿಹಾರ ಶಿಬಿರಗಳು ಕಾರ್ಯಚರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

0 Comments